ದುಬೈ : ಇಂಗ್ಲೆಂಡ್ ಆಲ್ರೌಂಡರ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಬೆನ್ ಸ್ಟೋಕ್ಸ್ ಐಪಿಎಲ್ನಲ್ಲಿ ಪಾಲ್ಗೊಳ್ಳುವುದಕ್ಕೆ ದುಬೈಗೆ ಬಂದಿಳಿದಿದ್ದಾರೆ.
ತಂದೆಯ ಆರೋಗ್ಯ ಸಮಸ್ಯೆಯಿಂದ ಪಾಕ್ ವಿರುದ್ಧದ ಸರಣಿಯಿಂದ ಅರ್ಧದಲ್ಲೇ ಹೊರಬಂದಿದ್ದ ಸ್ಟೋಕ್ಸ್, ಆಸೀಸ್ ವಿರುದ್ಧದ ಸರಣಿ ಹಾಗೂ ಐಪಿಎಲ್ನ ಮೊದಲೆರಡು ವಾರಗಳ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.
ಇದೀಗ ಯುಎಇಗೆ ಶನಿವಾರ ರಾತ್ರಿ ಆಗಮಿಸಿದ್ದು, 6 ದಿನಗಳ ಕಾಲ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಈ ವೇಳೆ ಸ್ಟೋಕ್ಸ್ 2 ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಅದರಲ್ಲಿ ನೆಗೆಟಿವ್ ಪರೀಕ್ಷೆ ಪಡೆದ ನಂತರ ರಾಜಸ್ಥಾನ್ ರಾಯಲ್ಸ್ ತಂಡ ಸೇರಿಕೊಳ್ಳಲಿದ್ದಾರೆ.
ಕಿವೀಸ್ನಿಂದ ಬಂದಿಳಿದ ನಂತರ,'ದುಬೈ ಇಸ್ ಹಾಟ್' ಎಂದು ಕಾಮೆಂಟ್ ಮಾಡುವ ಮೂಲಕ ತಮ್ಮ ಆಗಮನದ ಸುದ್ದಿಯನ್ನ ಅಭಿಮಾನಿಗಳಿಗೆ ಖಚಿತಪಡಿಸಿದ್ದಾರೆ. ಸ್ಟೋಕ್ಸ್ ಆಗಮನದಿಂದ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮತ್ತಷ್ಟು ಬಲಿಷ್ಠವಾಗಿದೆ.
ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು ಬೀಗಿದ್ದ ರಾಯಲ್ಸ್ ನಂತರ ಎರಡು ಸತತ ಸೋಲುಗಳಿಂದ ಕಂಗೆಟ್ಟಿದೆ. ಇದೀಗ ಸ್ಟೋಕ್ಸ್ ಆಗಮನದಿಂದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಬಲ ಬಂದಂತಾಗಿದೆ.
ಮಂಗಳವಾರ ರಾಜಸ್ಥಾನ್ ರಾಯಲ್ಸ್ ಅಬುಧಾಬಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಎದುರಿಸಲಿದೆ. ಸ್ಟೋಕ್ಸ್ ಅಕ್ಟೋಬರ್ 14ರಂದು ಡೆಲ್ಲಿ ಕ್ಯಾಪಿಟಲ್ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ.