ಕೋಲ್ಕತ್ತಾ: ಡಿಸೆಂಬರ್ 19ರಂದು ನಡೆಯುವ ಐಪಿಎಲ್ನ ಹರಾಜು ಪ್ರಕ್ರಿಯೆಯಲ್ಲಿ ಸುಮಾರು 338ಆಟಗಾರರಿದ್ದು, ಇದರಲ್ಲಿ ಕೇವಲ 73 ಆಟಗಾರರು ಮಾತ್ರ 8 ಪ್ರಾಂಚೈಸಿಗಳು ಕೊಂಡುಕೊಳ್ಳಬಹುದಾಗಿದೆ.
ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಆಡುವ ಅವಕಾಶಕ್ಕಾಗಿ ದೇಶ ವಿದೇಶದ ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈಗಾಗಲೆ 900 ಕ್ಕೂ ಹೆಚ್ಚಿದ್ದ ಆಟಗಾರರ ಪಟ್ಟಿಯನ್ನು 338 ಕ್ಕೆ ಸೀಮಿತಗೊಳಿಸಲಾಗಿದೆ. ಅದರಲ್ಲೂ ಕೆಲವು ವಿದೇಶಿ ಆಟಗಾರರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಐಪಿಎಲ್ ಪ್ರಾಂಚೈಸಿಗಳು ಹಾತೊರೆಯುತ್ತಿವೆ. ಅಂತಹ ಆಟಗಾರರ ವಿವರ ಇಲ್ಲಿದೆ.
ಪ್ಯಾಟ್ ಕಮ್ಮಿನ್ಸ್(2 ಕೋಟಿ)
ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 2017ರಲ್ಲಿ ಕೊನೆಯ ಬಾರಿಗೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಆ ಆವೃತ್ತಿಯಲ್ಲಿ 15 ವಿಕೆಟ್ ಪಡೆದಿದ್ದ ಕಮ್ಮಿನ್ಸ್ 2018ರಲ್ಲಿ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದರೂ ಗಾಯದ ಸಮಸ್ಯೆಯಿಂದ ಹೊರಗುಳಿಯಬೇಕಾಯಿತು. 2019ರ ಆವೃತ್ತಿಯಲ್ಲಿ ವಿಶ್ವಕಪ್ ಇದ್ದಿದ್ದರಿಂದ ಅವರು ಐಪಿಎಲ್ನಿಂದ ಹೊರಗುಳಿಯಲು ನಿರ್ಧರಿಸಿದ್ದರು. ಇದೀಗ 2020ಕ್ಕೆ ಮತ್ತೆ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿದ್ದು ಭರ್ಜರಿ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆಯಿದೆ.
ಗ್ಲೇನ್ ಮ್ಯಾಕ್ಸ್ವೆಲ್(2 ಕೋಟಿ)
ಟಿ20 ಕ್ರಿಕೆಟ್ಗೆ ಹೇಳಿಮಾಡಿಸಿದಂತಿರುವ ಆಸ್ಟ್ರೇಲಿಯಾದ ಮ್ಯಾಕ್ಸ್ವೆಲ್ 2019ರಲ್ಲಿ ಆವೃತ್ತಿಯಿಂದ ಹೊರಗುಳಿದಿದ್ದರು. ಈಗಾಗಲೆ ಐಪಿಎಲ್ನಲ್ಲಿ ತಮ್ಮ ತಾಕತ್ತು ಪ್ರದರ್ಶಿಸಿರುವ ಮ್ಯಾಕ್ಸ್ವೆಲ್ ಸ್ಫೋಟಕ ಬ್ಯಾಟ್ಸ್ಮನ್ ಹಾಗೂ ಸಾಂದರ್ಭಿಕ ಸ್ಪಿನ್ ಬೌಲರ್ ಆಗಿದ್ದಾರೆ. ಟಿ20 ಕ್ರಿಕಟ್ನಲ್ಲಿ 150 ಸ್ಟ್ರೈಕ್ ರೇಟ್ ಹೊಂದಿರುವ ಇವರು ಹರಾಜು ಪ್ರಕ್ರಿಯೆಯ ಕೇಂದ್ರಬಿಂದುವಾಗಲಿದ್ದಾರೆ. ಇವರು ಡೆಲ್ಲಿ, ಪಂಜಾಬ್, ಮುಂಬೈ ಪ್ರಾಂಚೈಸಿಯಲ್ಲಿ ಆಡಿದ ಅನುಭವ ಹೊಂದಿದ್ದಾರೆ.
ಕ್ರಿಸ್ ಲಿನ್(2 ಕೋಟಿ)
ಆಸೀಸ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಲಿನ್ರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಎರಡು ಬಾರಿ ರೀಟೈನ್ ಮಾಡಿಕೊಂಡರು 13ನೇ ಆವೃತ್ತಿಗೆ ತಂಡದಿಂದ ಕೈಬಿಟ್ಟಿದೆ. ಲಿನ್ ಟಿ20 ಕ್ರಿಕೆಟ್ನಲ್ಲಿ ಅದ್ಭುತ ಬ್ಯಾಟ್ಸ್ಮನ್ ಎಂಬುದನ್ನು ಈಗಾಗಲೆ ತಮ್ಮ ಆಟದ ಮೂಲಕವೇ ತೋರಿಸಿಕೊಟ್ಟಿದ್ದಾರೆ. 2019ರ ಐಪಿಎಲ್ನಲ್ಲಿ 4 ಅರ್ಧಶತಕದ ನೆರವಿನಿಂದ 405 ರನ್ಗಳಿಸಿದ್ದರು.ಇತ್ತೀಚೆಗೆ ನಡೆದ ಅಬುಧಾಬಿ ಟಿ20 ಲೀಗ್ನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಲಿನ್ ಈ ಬಾರಿ ಹೆಚ್ಚು ಬಿಡ್ ಆಗುವ ವಿದೇಶಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಶಿಮ್ರಾನ್ ಹೆಟ್ಮೈರ್(50 ಲಕ್ಷ)
ಐಪಿಎಲ್ಗೆ ಪದಾರ್ಪಣೆ ಮಾಡಿದ ಟೂರ್ನಿಯಲ್ಲಿ 4.2 ಕೋಟಿಗೆ ಆರ್ಸಿಬಿ ತಂಡ ಸೇರಿದ್ದ ಶಿಮ್ರಾನ್ ಹೆಟ್ಮೈರ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರಿದ್ದರು. ಇದೇ ಕಾರಣದಿಂದ ತಂಡದಿಂದ ಇವರನ್ನು ಕೈಬಿಡಲಾಗಿತ್ತು. ಆದರೆ ಈ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಉತ್ತಮ ಫಾರ್ಮ್ನಲ್ಲರುವುದರಿಂದ ಇವರೂ ಕೂಡ ಬಾರಿ ಬೇಡಿಕೆಯ ಆಟಗಾರನಾಗಲಿದ್ದಾರೆ.
ಸ್ಯಾಮ್ ಕರ್ರನ್(1 ಕೋಟಿ)
ಇಂಗ್ಲೆಂಡ್ನ ಯುವ ಆಲ್ರೌಂಡರ್ ಸ್ಯಾಮ್ಕರ್ರನ್ ಕೂಡ ಕಳೆದ ಸೀಸನ್ನಲ್ಲಿ 7.2 ಕೋಟಿ ಪಡೆದು ಅಚ್ಚರಿ ಮೂಡಿಸಿದ್ದರು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯವಿರುವುದರಿಂದ ಮತ್ತೊಮ್ಮೆ ಹೆಚ್ಚಿನ ಮೊತ್ತ ಪಡೆಯುವ ನಿರೀಕ್ಷೆಯಿದೆ.