ದುಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಾವು ಕ್ರಿಸ್ ಜೋರ್ಡಾನ್ ಹಿಂದೆ ಹೋಗಿದ್ದೆವು. ಆದರೆ, ನಮ್ಮ ಯೋಜನೆ ವಿಫಲವಾಗಿದ್ದರಿಂದ ಸೋಲು ಕಾಣಬೇಕಾಯಿತು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬ್ಯಾಟ್ಸ್ಮನ್ ಮಂದೀಪ್ ಸಿಂಗ್ ಹೇಳಿದ್ದಾರೆ.
ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ 20 ಓವರ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು 178 ರನ್‌ಗಳನ್ನು ಕಲೆ ಹಾಕಿತು. ಈ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಇನ್ನೂ 14 ಎಸೆತ ಬಾಕಿ ಇರುವಂತೆ 10 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.
ಶೇನ್ ವಾಟ್ಸನ್ ಹಾಗೂ ಫಾಫ್ ಡು ಪ್ಲೆಸಿಸ್ ಕ್ರಮವಾಗಿ 83 ಮತ್ತು 87 ರನ್‌ಗಳನ್ನು ಗಳಿಸಿ ಅಜೇಯರಾಗಿ ಉಳಿದುಕೊಂಡೇ ತಕ್ಕ ಜಯ ತಂದುಕೊಟ್ಟಿದ್ದರು. ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂದೀಪ್ ಸಿಂಗ್, ಈಗಾಗಲೇ 5 ಪಂದ್ಯಗಳಲ್ಲಿ 4 ಸೋಲು ಕಂಡಿದ್ದೇವೆ.
ಪ್ಲೇಆಫ್ ತಲುಪಬೇಕಾದ್ರೆ ಉಳಿದ 9 ಪಂದ್ಯಗಳಿಂದ 7 ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಿದೆ. ಆದರೆ, ತಂಡದಲ್ಲಿ ಬೌಲಿಂಗ್ ಸಮಸ್ಯೆ ಕಾಡುತ್ತಿದೆ. ಅದರಲ್ಲೂ ಡೆತ್ ಬೌಲಿಂಗ್ನಲ್ಲಿ ನಾವು ತುಂಬಾ ಹೆಣಗಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ನಿನ್ನೆಯ ಪಂದ್ಯದ ಬಗ್ಗೆ ಮಾತನಾಡಿದ ಮಂದೀಪ್, ನಾವು ಈ ಪಂದ್ಯದಲ್ಲಿ ಕ್ರಿಸ್ ಜೋರ್ಡಾನ್ರನ್ನು ನೆಚ್ಚಿಕೊಂಡಿದ್ದೆವು. ಆದರೆ, ವಾಟ್ಸನ್ ಹಾಗೂ ಪ್ಲೆಸಿಸ್ ಆರಂಭದಿಂದಲೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದರಿಂದ, ನಮ್ಮ ಯಾವುದೇ ಯೋಜನೆ ಫಲಿಸಲಿಲ್ಲ.
ಮುಂದಿನ ಪಂದ್ಯದಲ್ಲಿ ನಾವು ಗೆಲುವಿನ ಹಳಿಗೆ ಮರಳಲಿದ್ದೇವೆ ಎಂಬ ವಿಶ್ವಾಸವಿದೆ. ನಾವು ಉತ್ತಮ ಬೌಲಿಂಗ್ ಮಾಡಿದ್ರೆ ಖಂಡಿತಾ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.