ದುಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಕೇವಲ ಅಭಿಮಾನಿಗಳಿಗೆ ಮಾತ್ರ ಹಬ್ಬವಲ್ಲ. ಈ ನಗದು ಸಮೃದ್ಧ ಲೀಗ್ ತ್ವರಿತವಾಗಿ ಹಣ ಸಂಪಾದಿಸಲು ಬುಕ್ಕಿಗಳಿಗೂ ಕೂಡ ಅತ್ಯುತ್ತಮ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ.
ಆದರೆ, 13ನೇ ಆವೃತ್ತಿಯ ಐಪಿಎಲ್ ವಿಭಿನ್ನವಾಗಿದ್ದು, ಇದರಲ್ಲಿ ಯಾವುದೇ ಬುಕ್ಕಿಗಳು ಯಾವುದೇ ರೀತಿಯಲ್ಲಿ ತಮ್ಮ ಚಾಲಾಕಿತನ ತೋರುವಲ್ಲಿ ವಿಫಲರಾಗಿದ್ದಾರೆ ಎಂದು ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಬಹಿರಂಗಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸಿಯು ಮುಖ್ಯಸ್ಥ, ಬುಕ್ಕಿಗಳು ದುಬೈಗೆ ಆಗಮಿಸಿದ್ದಾರೆ ಎಂಬ ಮಾಹಿತಿ ನಮ್ಮ ತಂಡದ ಗಮನಕ್ಕೆ ಬಂದಿದೆ ಎಂದಿದ್ದಾರೆ. ಆದರೆ ಟೂರ್ನಮೆಂಟ್ ಪಾವಿತ್ರ್ಯವನ್ನು ಮುರಿಯಲು ಅವರಿಂದ ಯಾವುದೇ ಪ್ರಗತಿ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಕೆಲವು ಬುಕ್ಕಿಗಳು ದುಬೈಗೆ ತೆರಳಿದ್ದಾರೆ. ಆದರೆ, ಅವರಿಗೆ ಅಂದುಕೊಂಡಂತೆ ಮುನ್ನಡೆಯಲು ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ಎಲ್ಲವೂ ಸುಗಮವಾಗಿ ಸಾಗುತ್ತಿವೆ. ಎಲ್ಲ ಕೆಲಸಗಳು ಕ್ರಮಬದ್ಧವಾಗಿ ನಡೆಯುತ್ತಿವೆ. ನಮಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಜೊತೆ ಮಾತ್ರವಲ್ಲ ಕೆಲಸ ಸ್ಥಳೀಯ ಪೊಲೀಸರು ಕೂಡ ತುಂಬಾ ಸಹಾಯ ಮಾಡುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಕ್ರಿಕೆಟ್ ನಡೆಯುವ ಸ್ಥಳದಲ್ಲಿ ಬಯೋ-ಸೆಕ್ಯೂರ್ ಬಬಲ್ ಇದೆ, ಹಾಗೂ ಅಲ್ಲಿ ಪ್ರವೇಶಗಳನ್ನು ನಿರ್ಬಂಧಿಸಲಾಗಿದೆ. ಆದರೆ, ನಿಮ್ಮ ತಂಡ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಕೇಳಿದ್ದಕ್ಕೆ ಸಿಂಗ್, " ನಾವೂ ಮೂರು ಪ್ರತ್ಯೇಕ ತಂಡಗಳನ್ನು ಹೊಂದಿದ್ದೇವೆ. ಅ ತಂಡಗಳೂ ಐಪಿಎಲ್ ನಡೆಯುವ ಮೂರು ಸ್ಥಳಗಳಲ್ಲಿ ಕೆಲಸ ಮಾಡುತ್ತಿವೆ. ನಮಗೆ ಸ್ಥಳೀಯ ಪೊಲೀಸರು, ಇಸಿಬಿ ಹಾಗೂ ಸ್ಥಳೀಯ ಅಧಿಕಾರಿಗಳ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದು, ಅವರು ಅಗತ್ಯವಿದ್ದಾಗ ನಮಗೆ ಸಹಾಯ ಮಾಡುತ್ತಿದ್ದಾರೆ. ಹಾಗಾಗಿ ನಾವು ಲೀಗ್ನ ಮೇಲೆ ಹದ್ದಿನ ಕಣ್ಣಿಟ್ಟಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.