ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣ ಚೇಸಿಂಗ್ ಹೇಳಿ ಮಾಡಿಸಿದ ಮೈದಾನ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಲ್ಲಿ ಸಾಕಷ್ಟು ಐಪಿಎಲ್ ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ ಟಾಸ್ ಗೆದ್ದ ಕೂಡಲೇ ಬ್ಯಾಟಿಂಗ್ ಆಯ್ಕೆ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಆದರೆ, ಅವರೇಕೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು ಎಂಬುದಕ್ಕೆ ಪಂದ್ಯದ ನಂತರ ಸ್ಪಷ್ಟನೆ ನೀಡಿದ್ದಾರೆ.
"ಚುಟುಕು ಕ್ರಿಕೆಟ್ನಲ್ಲಿ ನಮಗೆ ಚೇಸಿಂಗ್ ಆರಾಮದಾಯಕ ವಲಯವಾಗಿದೆ. ಹಾಗಾಗಿ ನಾವು ನಮಗೆ ಬ್ಯಾಟಿಂಗ್ ನಡೆಸಿ ಎದುರಾಳಿಗೆ ಉತ್ತಮ ಟಾರ್ಗೆಟ್ ಸೆಟ್ ಮಾಡಿ ಗೆಲ್ಲುವುದಕ್ಕೆ ಬಯಸಿದ್ದೆವು. ಅದೇ ಕಾರಣಕ್ಕೆ ಮೊದಲು ಬ್ಯಾಟಿಂಗ್ ನಡೆಸಲು ನಿರ್ಧರಿಸಿದೆ. ಆದರೆ, ನಮ್ಮ ಪರೀಕ್ಷೆ ವಿಫಲವಾಯಿತು. 200 ರನ್ಗಳನ್ನು ನಿರಾಯಾಸವಾಗಿ ಗಳಿಸುವ ಈ ಪಿಚ್ನಲ್ಲಿ ನಮ್ಮ ಅರಂಭ ಉತ್ತಮವಾಗಿತ್ತು. ಆದರೆ ಪಿಚ್ ಕಠಿಣವಾಗುತ್ತಿದ್ದಂತೆ 170 ಸಾಕು ಎಂದಿನಿಸಿತ್ತು. ಆದರೆ, ದಕ್ಷಿಣ ಆಫ್ರಿಕಾ ಬೌಲರ್ಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ನಿರಂತರ ವಿಕೆಟ್ ಕಳೆದುಕೊಂಡೆವು" ಎಂದು ಕೊಹ್ಲಿ ತಿಳಿಸಿದ್ದಾರೆ.
ನಮಗೆ ಸುಲಭ ಮಾರ್ಗವನ್ನು ಬಿಟ್ಟು ಹೊರಗೆ ಬರಬೇಕಿತ್ತು. ದೊಡ್ಡ ಟೂರ್ನಿಗಳಲ್ಲಿ ಯಾವುದೂ ನಮ್ಮ ಕೈಯಲ್ಲಿರುವುದಿಲ್ಲ, ಅಲ್ಲಿ ಎಂತಹ ಸವಾಲಿಗಾದರೂ ನಾವು ಸಿದ್ದವಾಗಬೇಕಾಗುತ್ತದೆ. ಆದ್ದರಿಂದ ನಿನ್ನೆ ಮೊದಲು ಬ್ಯಾಟಿಂಗ್ ಮಾಡುವುದು ನಮ್ಮ ಉದ್ದೇಶವಾಗಿತ್ತು. ಟಿ-20 ವಿಶ್ವಕಪ್ಗೂ ಮುನ್ನ ನಮ್ಮ ತಂಡ ಕಠಿಣ ಸವಾಲುಗಳನ್ನು ಸ್ವೀಕರಿಸುವುದಕ್ಕೆ ತಯಾರಾಗಬೇಕೆಂದು ವಿರಾಟ್ ತಿಳಿಸಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ನಡೆಸಿ 134 ರನ್ಗಳಿಸಿತ್ತು. ಈ ಮೊತ್ತವನ್ನು ದಕ್ಷಿಣ ಆಫ್ರಿಕಾ 1 ವಿಕೆಟ್ ಕಳೆದುಕೊಂಡು ಗೆಲವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತ್ತು.