ನವದೆಹಲಿ: ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಟೀಂ ಇಂಡಿಯಾವನ್ನು ಆಯ್ಕೆ ಮಾಡುವ ಉದ್ದೇಶದಿಂದ ಆಯ್ಕೆ ಸಮಿತಿ ಇಂದು ಸಭೆ ಸೇರಲಿದೆ. ಸುನಿಲ್ ಜೋಶಿ ನೇತೃತ್ವದ ಹೊಸ ಆಯ್ಕೆ ಸಮಿತಿಯ ಮೊದಲ ಪ್ರಮುಖ ಸಭೆ ಇದಾಗಿದೆ.
ಗಾಯಗಳಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದ ನಂತರ ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. "ಜೋಶಿ ಮತ್ತು ತಂಡವು, ಟೀಂ ಇಂಡಿಯಾವನ್ನು ಆಯ್ಕೆ ಮಾಡಲು ಇಂದು ಸಭೆ ಸೇರಲಿದೆ. ಇದು ಸುದೀರ್ಘ ಪ್ರವಾಸ ಎಂಬುದಷ್ಟೇ ಅಲ್ಲದೆ, ಬಯೋ-ಬಬಲ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ತಂಡ ಆಯ್ಕೆ ಮಾಡುವುದರಿಂದ ಆಸಕ್ತಿದಾಯಕವಾಗಿದೆ. ಇದೇ ವೇಳೆ ಕೆಲವು ಗಾಯದ ಸಮಸ್ಯೆಗಳನ್ನು ಪರಿಗಣಿಸಬೇಕಾಗಿದೆ. ವಿಶೇಷವಾಗಿ ಬೌಲಿಂಗ್ ವಿಭಾಗದಲ್ಲಿ ಈ ಸಮಸ್ಯೆ ಬಗ್ಗೆ ಹೆಚ್ಚು ಗಮನ ಹರಿಸಲಿದೆ" ಎಂದು ಮೂಲ ತಿಳಿಸಿದೆ.
ವಾಸ್ತವವಾಗಿ, ಕ್ವಾರಂಟೈನ್ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ವಿರಾಟ್ ಕೊಹ್ಲಿ ನಾಯಕತ್ವದ ತಂಡ, ಆಸೀಸ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಕೇವಲ ಎರಡು ಸ್ಥಳಗಳಲ್ಲಿ ಆಡಲಿದೆ ಎಂದು ಮೂಲಗಳು ತಿಳಿಸಿವೆ.
"ಯೋಜನೆ ಪ್ರಕಾರ ಅಡಿಲೇಡ್, ಮೆಲ್ಬೋರ್ನ್, ಸಿಡ್ನಿ ಮತ್ತು ಬ್ರಿಸ್ಬೇನ್ನಲ್ಲಿ ಟೆಸ್ಟ್ ಪಂದ್ಯ ನಡೆಯಬೇಕಿದೆ. ಆದರೆ ಕೊರೊನಾ ಸಂಬಂಧಿತ ಸಮಸ್ಯೆಗಳಿದ್ದರೆ, ನಾವು ನಾಲ್ಕು ಟೆಸ್ಟ್‌ಗಳನ್ನು ನಾಲ್ಕು ಸ್ಥಳಗಳಿಗಿಂತ ಎರಡು ಸ್ಥಳಗಳಲ್ಲಿ ಆಡುವ ಬಗ್ಗೆ ತೀರ್ಮಾನಿಸುತ್ತೇವೆ. ಅಂತಹ ಸನ್ನಿವೇಶ ನಿರ್ಮಾಣವಾದ್ರೆ ನಾವು ಅಡಿಲೇಡ್ ಮತ್ತು ಸಿಡ್ನಿಯತ್ತ ಗಮನ ಹರಿಸಲಿದ್ದೇವೆ" ಎಂದಿದ್ದಾರೆ.
ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಇಡೀ ತಂಡವು ಯುಎಇಯಲ್ಲಿ ಜೈವಿಕ ಸುರಕ್ಷಿತ ಪ್ರದೇಶದಲ್ಲಿ ಕ್ವಾರಂಟೈನ್ನಲ್ಲಿ ಇರಬೇಕಿದೆ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿದೆ.