ಸಿಡ್ನಿ : ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ವೇಳೆ ಹ್ಯಾಮ್ಸ್ಟ್ರಿಂಗ್ ಗಾಯಕ್ಕೊಳಗಾಗಿರುವ ಹನುಮ ವಿಹಾರಿ ಅವರು ಬ್ರಿಸ್ಬೇನ್ನಲ್ಲಿ ನಡೆಯುವ 4ನೇ ಟೆಸ್ಟ್ ಪಂದ್ಯದಿಂದ ಹೊರ ಬಿದ್ದಿದ್ದಾರೆ. 3ನೇ ಟೆಸ್ಟ್ ಪಂದ್ಯದ ನಂತರ ಅವರನ್ನು ಸ್ಕ್ಯಾನಿಂಗ್ಗೆ ಒಳಪಡಿಸಲಾಗಿದ್ದು, ಇಂದು ಸಂಜೆ ಅಥವಾ ಮಂಗಳವಾರ ಬೆಳಗ್ಗೆ ವರದಿ ಬರುವ ನಿರೀಕ್ಷೆಯಿದೆ.
ಆದಾಗ್ಯೂ, ಹನುಮ ವಿಹಾರಿ ನಾಲ್ಕನೇ ಪಂದ್ಯದಲ್ಲಿ ಆಡುವ ಸಾಧ್ಯತೆ ಕಡಿಮೆ ಎಂದು ಬಿಸಿಸಿಐ ಪಿಟಿಐಗೆ ಮಾಹಿತಿ ನೀಡಿದೆ. ಅವರು ಮುಂದಿನ ಮೂರು ದಿನಗಳಲ್ಲಿ ಮತ್ತೊಂದು ಪಂದ್ಯ ಆರಂಭವಾಗಲಿದ್ದು, ಈ ವೇಳೆಗೆ ಅವರು ಸಂಪೂರ್ಣ ಗುಣಮುಖರಾಗುವ ಸಾಧ್ಯತೆಯಿಲ್ಲ ಎಂದು ತಿಳಿಸಿದೆ. ಆಂಧ್ರ ಕ್ರಿಕೆಟಿಗ ಸೋಮವಾರ 161 ಎಸೆತಗಳನ್ನು ಎದುರಿಸಿ 23 ರನ್ಗಳಿಸಿ ಸಿಡ್ನಿ ಟೆಸ್ಟ್ ಡ್ರಾ ಆಗುವಂತೆ ಮಾಡಿದ್ದರು.
ಸ್ಕ್ಯಾನ್ ವರದಿಗಳು ಬಂದ ನಂತರವೇ ವಿಹಾರಿ ಅವರ ಗಾಯದ ಪ್ರಮಾಣವನ್ನು ಕಂಡು ಹಿಡಿಯಬಹುದು. ಆದರೆ, ಅದು ಗ್ರೇಡ್ 1 ಗಾಯವಾಗಿದ್ದರೂ ಸಹಾ ಅವರು ಕನಿಷ್ಠ ನಾಲ್ಕು ವಾರಗಳ ಕಾಲ ಹೊರಗಿರಬೇಕಾಗಿರುತ್ತದೆ. ಜೊತೆಗೆ ನಂತರ ಎನ್ಸಿಎನಲ್ಲಿ ಪುನರ್ವಸತಿಗೆ ಒಳಗಾಗಬೇಕಿದೆ.
ಆದ್ದರಿಂದ ಬ್ರಿಸ್ಬೇನ್ ಟೆಸ್ಟ್ ಮಾತ್ರವಲ್ಲದೆ, ಅವರು ತವರಿನಲ್ಲಿ ನಡೆಯುವ ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ತಪ್ಪಿಸಿಕೊಳ್ಳಬೇಕಾಗುತ್ತದೆ" ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ವಿಹಾರಿ ಅನುಪಸ್ಥಿತಿಯಲ್ಲಿ ತಂಡದಲ್ಲಿ ಹೆಚ್ಚಿನ ಆಯ್ಕೆಗಳಿಲ್ಲದಿರುವುದರಿಂದ ಪಂತ್ರನ್ನು ಬ್ಯಾಟ್ಸ್ಮನ್ ಆಗಿ ಆಡಿಸಿ, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಸಹಾಗೆ ನೀಡಬೇಕಾಗಿದೆ. ಆಥವಾ ಮಯಾಂಕ್ಗೆ ಅವಕಾಶ ನೀಡಿ ಮಧ್ಯಮ ಕ್ರಮಾಂಕದಲ್ಲಿ ಯಾರನ್ನಾದರೂ ಆರಂಭಿಕರನ್ನು ಆಡಿಸಬೇಕಾಗುತ್ತದೆ.
ಇನ್ನು, ಎಡಗೈ ಹೆಬ್ಬೆರಳು ಮುರಿತಕ್ಕೊಳಗಾಗಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಬದಲು ಮುಂದಿನ ಟೆಸ್ಟ್ಗೆ ಶಾರ್ದುಲ್ ಠಾಕೂರ್ಗೆ ಅವಕಾಶ ನೀಡಬಹುದು ಎನ್ನಲಾಗಿದೆ. ಅವರನ್ನು ಬಿಟ್ಟರೆ ತಂಗರಸು ನಟರಾಜನ್ ಮಾತ್ರ ತಂಡದಲ್ಲಿರುವ ಮತ್ತೊಂದು ಆಯ್ಕೆಯಾಗಿದೆ. ಆದರೆ, ಠಾಕೂರ್ ಹೆಚ್ಚಿನ ಪ್ರಥಮ ದರ್ಜೆ ಕ್ರಿಕೆಟ್ ಅನುಭವ ವಿರುವುದರಿಂದ ಟೀಂ ಮ್ಯಾನೇಜ್ ನೆಚ್ಚಿನ ಆಯ್ಕೆಯಾಗಬಹುದು ಎನ್ನಲಾಗಿದೆ.
ಇದನ್ನು ಓದಿ: ಪೂಜಾರ, ಪಂತ್, ಅಶ್ವಿನ್ ಅವರ ಮಹತ್ವ ಎಲ್ಲರಿಗೂ ಅರಿವಾಗಿದೆ: ಸೌರವ್ ಗಂಗೂಲಿ