ಇಂದೋರ್: ಭಾರತದ ವಿರುದ್ಧ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಸೋಲನುಭವಿಸಿರುವ ಶ್ರೀಲಂಕಾ ತಂಡಕ್ಕೆ ಆಲ್ರೌಂಡರ್ ಇಸುರು ಉದಾನ ಗಾಯಕ್ಕೆ ತುತ್ತಾಗಿರುವುದು ಮತ್ತೊಂದು ಆಘಾತತಂದಿದೆ.
ಟಿ20 ಸ್ಪೆಷಲಿಸ್ಟ್ ಆಗಿರುವ ಉದಾನ ಎರಡನೇ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿರುವುದರಿಂದ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ. ಭಾರತ ಬ್ಯಾಟಿಂಗ್ ಆಗಮಿಸುವ ವೇಳೆ ಅಭ್ಯಾಸ ಮಾಡುತ್ತಿರುವಾಗ ಉದಾನ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೋಚ್ ಮಿಕಿ ಆರ್ಥರ್, ಉದಾನ ಅಭ್ಯಾಸ ಮಾಡುತ್ತಿದ್ದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದಾರೆ. ಮುಂದಿನ ವೆಸ್ಟ್ ಇಂಡೀಸ್ ಸರಣಿಯ ವೇಳೆಗೆ ಚೇತರಿಸಿಕೊಳ್ಳಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದೇವೆ. ನಾವು ಕೂಡ ಅವರು ಬೇಗ ಗುಣಮುಖರಾಗಲಿ ಎಂದು ಆಶಿಸುತ್ತೇವೆ ಎಂದು ತಿಳಿಸಿದ್ದಾರೆ.
ಉದಾನ ಕೇವಲ 2 ಎಸೆತಗಳನ್ನೆದುರಿಸಿ ಒಂದು ರನ್ಗಳಿಸಿದ್ದರು. ಅವರು ಬೌಲಿಂಗ್ ಬಾರದೇ ಇರುವುದು ಶ್ರೀಲಂಕಾ ತಂಡಕ್ಕೆ ದೊಡ್ಡ ಹೊಡೆತವನ್ನೇ ನೀಡಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಶ್ರೀಲಂಕಾ ತಂಡ ಭಾರತದ ಶಿಸ್ತುಬದ್ದ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 142 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ ತಂಡ 17.3 ಓವರ್ಗಳಲ್ಲಿ ಗುರಿ ತಲುಪಿ 2020ರ ಆವೃತ್ತಿಯಲ್ಲಿ ಮೊದಲ ಪಂದ್ಯದಲ್ಲೇ ಗೆದ್ದು ಬೀಗಿದೆ.