ಇಂದೋರ್: ಬಾಂಗ್ಲಾದೇಶವನ್ನು ಇನ್ನಿಂಗ್ಸ್ ಹಾಗೂ 130 ರನ್ಗಳಿಂದ ಮಣಿಸುವ ಮೂಲಕ ಕೊಹ್ಲಿ ನಾಯಕನಾಗಿ 32ನೇ ಟೆಸ್ಟ್ ಪಂದ್ಯ ಗೆದ್ದು ಆಸ್ಟ್ರೇಲಿಯಾ ಮಾಜಿ ನಾಯಕ ಅಲನ್ ಬಾರ್ಡರ್ ದಾಖಲೆ ಸರಿಗಟ್ಟಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ 52 ಟೆಸ್ಟ್ ಪಂದ್ಯಗಳ ಪೈಕಿ ಭಾರತ 32 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಲನ್ ಬಾರ್ಡರ್ 93 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ನಾಯಕರಾಗಿದ್ದು, 32 ಪಂದ್ಯಗಳಲ್ಲಿ ಜಯ ತಂದುಕೊಟ್ಟಿದ್ದರು. ಇದೀಗ ಕೇವಲ 52 ಪಂದ್ಯಗಳಲ್ಲೇ ಕೊಹ್ಲಿ 32 ಜಯ ತಂದುಕೊಟ್ಟು ಬಾರ್ಡರ್ಗಿಂತ ವೇಗವಾಗಿ ಈ ಸಾಧನೆ ಮಾಡಿದ್ದಾರೆ.
ಇನ್ನು ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದು, ಅವರು 109 ಟೆಸ್ಟ್ ಪಂದ್ಯಗಳಲ್ಲಿ 53 ಗೆಲುವು ಸಾಧಿಸಿದ್ದಾರೆ. ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಇದ್ದು 77 ಟೆಸ್ಟ್ ಪಂದ್ಯಗಳಲ್ಲಿ 48 ಗೆಲುವು ದಾಖಲಿಸಿದ್ದಾರೆ.
57 ಟೆಸ್ಟ್ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದ ಸ್ಟೀವ್ ವಾ 41ರಲ್ಲಿ ಗೆಲುವು ಸಾಧಿಸಿ 3ನೇ ಸ್ಥಾನಲ್ಲಿದ್ದರೆ, ವಿಂಡೀಸ್ನ ಕ್ಲೈವ್ ಲಾಯ್ಡ್ 74 ಟೆಸ್ಟ್ ಪಂದ್ಯಗಳಲ್ಲಿ 36 ಗೆಲುವಿನೊಡನೆ 4ನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಇದೀಗ 5ನೇ ಸ್ಥಾನದಲ್ಲಿದ್ದು, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮುಗಿಯುವುದರೊಳಗೆ ಎರಡು ಅಥವಾ ಮೂರನೇ ಸ್ಥಾನಕ್ಕೇರಲಿದ್ದಾರೆ.