ಹೈದರಾಬಾದ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಶಿಮ್ರಾನ್ ಹೆಟ್ಮಯರ್ ಅರ್ಧಶತಕ ಮತ್ತು ಲೆವಿಸ್ ಹಾಗು ಪೊಲಾರ್ಡ್ ಬಿರುಸಿನ ಬ್ಯಾಟಿಂಗ್ ಸಹಾಯದಿಂದ 207 ರನ್ ಗಳಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡಿಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಯ್ತು. ಎರಡನೇ ಓವರ್ನಲ್ಲಿ ದೀಪಕ್ ಚಹಾರ್ ಎಸೆತದಲ್ಲಿ ಲೆಂಡ್ಲೆ ಸಿಮನ್ಸ್ ರೋಹಿತ್ ಶರ್ಮಾಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ನಿರ್ಗಮಿಸಿದ್ರು. ಆರಂಭದಿಂದಲೂ ಅಬ್ಬರಿಸಿದ ಲೆವಿಸ್ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದರು. ಕೇವಲ 17 ಎಸೆತಗಳಲ್ಲಿ 40 ರನ್ ಸಿಡಿಸಿ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಎಲ್ಬಿಗೆ ಬಲಿಯಾದ್ರು.
ನಂತರ ಜೊತೆಯಾದ ಶಿಮ್ರಾನ್ ಹೆಟ್ಮಯರ್ ಮತ್ತು ಬ್ರಾಂಡನ್ ಕಿಂಗ್ ಕೆಲಕಾಲ ಟೀಂ ಇಂಡಿಯಾ ಬೌಲರ್ಗಳನ್ನು ಕಾಡಿದ್ರು. ಉತ್ತಮವಾಗಿ ಬ್ಯಾಟ್ ಬೀಸಿದ ಬ್ರಾಂಡನ್ ಕಿಂಗ್ 23 ಎಸೆತಗಳಲ್ಲಿ 31 ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡ್ರು.

ಭರ್ಜರಿ ಬ್ಯಾಟಿಂಗ್ ನಡೆಸಿದ ಹೆಟ್ಮಯರ್ ಅರ್ಧಶತಕ ಸಿಡಿಸಿದ್ರು. 56 ರನ್ ಗಳಿಸಿರುವಾಗ ಚಹಾಲ್ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಔಟ್ ಆದ್ರು. ಪೊಲಾರ್ಡ್ ಮತ್ತು ಹೆಟ್ಮಯರ್ ಜೋಡಿ ನಾಲ್ಕನೇ ವಿಕೆಟ್ಗೆ 71 ರನ್ಗಳ ಜೊತೆಯಾಟ ನೀಡಿದ್ರು. ಇತ್ತ ಬಿರುಸಿನ ಬ್ಯಾಟಿಂಗ್ ನಡೆಸಿದ ನಾಯಕ ಪೊಲಾರ್ಡ್ 18 ಎಸೆತದಲ್ಲಿ 37 ರನ್ ಸಿಡಿಸಿ ಚಹಾಲ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದ್ರು.
ಒಂದು ಹಂತದಲ್ಲಿ ಟೀಂ ಇಂಡಿಯಾವನ್ನು ಕಾಡಿದ್ದ ಇಬ್ಬರು ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ ಸೇರಿಸುವಲ್ಲಿ ಚಹಾಲ್ ಯಶಸ್ವಿಯಾದ್ರು. ಅಂತಿಮವಾಗಿ ವಿಂಡೀಸ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿದೆ. ಟೀಂ ಇಂಡಿಯಾ ಪರ ಚಹಾಲ್ 2, ದೀಪಕ್ ಚಹಾರ್, ವಾಷಿಂಗ್ಟನ್ ಸುಂದರ್, ಜಡೇಜಾ ತಲಾ 1 ವಿಕೆಟ್ ಪಡೆದರು.