ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 11 ವರ್ಷಗಳ ಬಳಿಕ ಫಾಲೋಆನ್ ಹೇರುವ ಮೂಲಕ ಕೊಹ್ಲಿ ಬಳಗ ಅಪರೂಪದ ದಾಖಲೆಗೆ ಪಾತ್ರವಾಗಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಕೊಹ್ಲಿ ದ್ವಿಶತಕ ಹಾಗೂ ಮಯಾಂಕ್ ಅಗರ್ವಾಲ್ ಶತಕದ ನೆರವಿನಿಂದ 601 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಈ ಮೊತ್ತವನ್ನು ಬೆನ್ನೆತ್ತಿದ ದಕ್ಷಿಣ ಆಫ್ರಿಕಾ ತಂಡ ಭಾರತೀಯ ಬೌಲಿಂಗ್ ದಾಳಿಗೆ ತತ್ತರಿಸಿ 275 ರನ್ಗಳಿಗೆ ಆಲೌಟ್ ಆಗಿತ್ತು. 326 ರನ್ಗಳ ಬೃಹತ್ ಮುನ್ನಡೆ ಸಾಧಿಸಿದ ಭಾರತ ಹರಿಣಗಳಿಗೆ ಫಾಲೋಆನ್ ಹೇರಿತ್ತು.
ಈ ಮೂಲಕ ಭಾರತ ತಂಡ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಪಾಲೋಆನ್ ಹೇರಿ ದಾಖಲೆ ಬರೆಯಿತು. ಅಲ್ಲದೆ 2008ರ ಬಳಿಕ ದಕ್ಷಿಣ ಆಫ್ರಿಕಾ ತಂಡವನ್ನು ಪಾಲೋಆನ್ಗೆ ಒಳಪಡಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.
2008ರಲ್ಲಿ ಇಂಗ್ಲೆಂಡ್ ತಂಡ ಹರಿಣಗಳಿಗೆ ಫಾಲೋಆನ್ ಹೇರಿತ್ತು. ಆ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ ಗ್ರೇಮ್ ಸ್ಮಿತ್, ನೈಲ್ ಮೆಕೆಂಜಿ ಹಾಗೂ ಹಾಶಿಮ್ ಆಮ್ಲ ಅವರ ಶತಕದ ನೆರವಿನಿಂದ ಡ್ರಾ ಸಾಧಿಸುವಲ್ಲಿ ಯಶಶ್ವಿಯಾಗಿತ್ತು. ಇದಾದ ಬಳಿಕ ಟಸ್ಟ್ ಕ್ರಿಕೆಟ್ನಲ್ಲಿ ಬಲಿಷ್ಠವಾಗಿದ್ದ ದಕ್ಷಿಣ ಆಫ್ರಿಕಾ ತಂಡದ ಮೇಲೆ ಯಾವುದೇ ಟೀಂ ಫಾಲೋಆನ್ ಹೇರಲು ಸಾಧ್ಯವಾಗಿರಲಿಲ್ಲ.
ಇನ್ನು, ಭಾರತ ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಕೊಹ್ಲಿಗೆ ಈ ಪಂದ್ಯ ಸೇರಿ 14 ಬಾರಿ ಎದುರಾಳಿಗೆ ಫಾಲೋಆನ್ ಹೇರುವ ಅವಕಾಶ ಒದಗಿ ಬಂದಿತ್ತಾದರೂ ಕೊಹ್ಲಿ 7 ಬಾರಿ ಮಾತ್ರ ಫಾಲೋಆನ್ ಹೇರಿದ್ದರು. ಇದರಲ್ಲಿ ಈ ಪಂದ್ಯ ಸೇರಿದಂತೆ 5 ಜಯ ಸಾಧಿಸಿದ್ದರೆ, 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿದೆ. ಆ ಎರಡೂ ಪಂದ್ಯಗಳಲ್ಲೂ ಭಾರತವೇ ಗೆಲ್ಲುವ ಅವಕಾಶವಿತ್ತಾದರೂ ಮಳೆಯ ಕಾರಣ ಡ್ರಾನಲ್ಲಿ ಅಂತ್ಯಗೊಂಡಿತ್ತು.