ಹೈದರಾಬಾದ್: 1932ರಿಂದ ಭಾರತ ಮತ್ತು ಇಂಗ್ಲೆಂಡ್ ತಂಡಗಳು 122 ಬಾರಿ ಟೆಸ್ಟ್ ಕ್ರಿಕೆಟ್ನಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 26 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಇಂಗ್ಲೆಂಡ್ 43 ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಎರಡು ತಂಡಗಳ ಮುಖಾಮುಖಿಯಲ್ಲಿ ಹಲವಾರು ಬ್ಯಾಟ್ಸ್ಮನ್ಗಳಿಂದ ಕೆಲವೊಂದು ಅದ್ಭುತ ಬ್ಯಾಟಿಂಗ್ ಪ್ರದರ್ಶನ ಹೊರಬಂದಿದ್ದು ಅದರಲ್ಲಿ ಟಾಪ್ 5 ಇನ್ನಿಂಗ್ಸ್ಗಳ ವಿವಿರ ಇಲ್ಲಿದೆ.
ಗ್ರಹಾಂ ಗೂಚ್- 333(1990)
3 ಪಂದ್ಯಗಳ ಸರಣಿಗಾಗಿ ಭಾರತ ತಂಡ ಇಂಗ್ಲೆಂಡ್ಗೆ ಪ್ರವಾಸ ಕೈಗೊಂಡಿದ್ದ ವೇಳೆ ಮೊದಲ ಟೆಸ್ಟ್ನಲ್ಲಿ ಗೂಚ್ ಬರೋಬ್ಬರಿ 333 ರನ್ ಗಳಿಸಿದ್ದರು. ಅವರು ಕೇವಲ 36 ರನ್ ಗಳಿಸಿದ್ದ ವೇಳೆ ಕೀಪರ್ ಕಿರಣ್ ಮೋರೆ ಕ್ಯಾಚ್ ಬಿಟ್ಟಿದ್ದರು. ಇದರ ಸಂಪೂರ್ಣ ಲಾಭ ಪಡೆದ ಗೂಚ್ 485 ಎಸೆತಗಳಲ್ಲಿ 333 ರನ್ ಗಳಿಸಿದ್ದರು. ಇವರ ತ್ರಿಶತಕದ ನೆರವಿನಿಂದ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು 653 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ 454 ರನ್ ಗಳಿಸಿತ್ತು. ರವಿ ಶಾಸ್ತ್ರಿ(100), ಮೊಹಮ್ಮದ್ ಅಜರುದ್ದೀನ್(121) ಶತಕ ಸಿಡಿಸಿದ್ದರು. ನಂತರ ಇಂಗ್ಲೆಂಡ್ 272 ರನ್ ಗಳಿಸಿ ಡಿಕ್ಲೇರ್ ಘೋಷಿಸಿ ಭಾರತಕ್ಕೆ 472 ರನ್ಗಳ ಗುರಿ ನೀಡಿತ್ತು. ಟೀಮ್ ಇಂಡಿಯಾ 224 ರನ್ಗಳಿಗೆ ಆಲೌಟ್ ಆಗಿ 247 ರನ್ಗಳ ಸೋಲು ಕಂಡಿತ್ತು.
ಕರುಣ್ ನಾಯರ್ - 303 ನಾಟೌಟ್(2016)
ಭಾರತದ ಪರ ಆಡಿದ ತಮ್ಮ 3ನೇ ಟೆಸ್ಟ್ನಲ್ಲಿ ಕರ್ನಾಟಕದ ಯುವ ಆಟಗಾರ ತ್ರಿಶತಕ ಬಾರಿಸಿ ಮೆರೆದಾಡಿದ್ದರು. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ನಂತರ ಭಾರತದ ಪರ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಅವರು 32 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದ್ದರು. ಇವರ ಇನ್ನಿಂಗ್ಸ್ ನೆರವಿನಿಂದ ಭಾರತ ತಂಡ 7 ವಿಕೆಟ್ ಕಳೆದುಕೊಂಡು 759 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ 477 ಮತ್ತು 2ನೇ ಇನ್ನಿಂಗ್ಸ್ನಲ್ಲಿ 207ಕ್ಕೆ ಆಲೌಟ್ ಆಗಿ ಇನ್ನಿಂಗ್ಸ್ ಮತ್ತು 75 ರನ್ಗಳಿಂದ ಸೋಲು ಕಂಡಿತ್ತು. ದುರಾದೃಷ್ಟವಶಾತ್ 2017ರಲ್ಲಿ ತಂಡದಿಂದ ಹೊರಬಿದ್ದ ಕರುಣ್ ನಾಯರ್ ಮತ್ತೆ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಲಿಲ್ಲ.
ಆಲೈಸ್ಟರ್ ಕುಕ್-294(2011)
2011ರ ಪ್ರವಾಸಿ ಭಾರತವನ್ನು ಇಂಗ್ಲೆಂಡ್ ತಂಡ 224 ರನ್ಗಳಿಗೆ ಆಲೌಟ್ ಮಾಡಿತ್ತು. ನಂತರ ಆಂಗ್ಲರ ಪರ ಇನ್ನಿಂಗ್ಸ್ ಆರಂಭಿಸಿದ್ದ ಎಡಗೈ ಆರಂಭಿಕ ಬ್ಯಾಟ್ಸ್ಮನ್ ಆಲೈಸ್ಟರ್ ಕುಕ್ 545 ಎಸೆತಗಳಲ್ಲಿ 294 ರನ್ ಸಿಡಿಸಿದ್ದರು. ಇವರ ದ್ವಿಶತಕದ ನೆರವಿನಿಂದ ಇಂಗ್ಲೆಂಡ್ 710/7 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ 244 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 242 ರನ್ಗಳ ಸೋಲು ಕಂಡಿತ್ತು.
ಜೆಫ್ರಿ ಬಾಯ್ಕಾಟ್-246 ನಾಟೌಟ್ 1967
1967ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ಜೆಫ್ರಿ ಬಾಯ್ಕಾಟ್ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ 246 ರನ್ ಗಳಿಸಿದ್ದರು. ಇವರ ಇನ್ನಿಂಗ್ಸ್ ನೆರವಿನಿಂದ ಇಂಗ್ಲೆಂಡ್ 550/4 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 164ಕ್ಕೆ ಆಲೌಟ್ ಆಗಿ, ಫಾಲ್ಆನ್ಗೆ ಗುರಿಯಾಯಿತು. ನಂತರ 2ನೇ ಇನ್ನಿಂಗ್ಸ್ನಲ್ಲಿ ನಾಯಕ ಮನ್ಸೂರ್ ಆಲಿಖಾನ್ ಪಟೌಡಿ ಅವರ 148 ರನ್ಗಳ ನೆರವಿನಿಂದ 510 ರನ್ ಗಳಿಸಿ ಇಂಗ್ಲೆಂಡ್ಗೆ 125 ರನ್ಗಳ ಗುರಿ ನೀಡಿತು. ಈ ಮೊತ್ತವನ್ನು ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು ತಲುಪಿತ್ತು.
ಇಯಾನ್ ಬೆಲ್-235(2011)
2011ರಲ್ಲಿ ಭಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ಮೊದಲ ಇನ್ನಿಂಗ್ಸ್ನಲ್ಲಿ ಆತಿಥೇಯ ತಂಡ 6 ವಿಕೆಟ್ ಕಳೆದುಕೊಂಡು 591 ರನ್ ಗಳಿಸಿತ್ತು. ಇಯಾನ್ ಬೆಲ್ 264 ಎಸೆತಗಳಲ್ಲಿ 235 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆಗಿದ್ದರು. ನಂತರ ಭಾರತವನ್ನು 300 ರನ್ಗಳಿಗೆ ಕೆಡವಿದ ಆಂಗ್ಲರು ಫಾಲ್ಆನ್ ಏರಿದರು. ಭಾರತ ತಂಡ ಎರಡನೇ ಇನ್ನಿಂಗ್ಸ್ನಲ್ಲಿ 283ಕ್ಕೆ ಸರ್ವಪತನ ಕಂಡು ಇನ್ನಿಂಗ್ಸ್ ಹಾಗೂ 8 ರನ್ಗಳ ಸೋಲು ಕಂಡಿತ್ತು.
ಈ 5 ಇನ್ನಿಂಗ್ಸ್ಗಳು ಎರಡೂ ತಂಡಗಳು ಎದುರು ಬದುರಾದಾಗ ಬಂದಿರುವ ಟಾಪ್ 5 ಇನ್ನಿಂಗ್ಸ್ಗಳಾಗಿವೆ. ಇದರ ಜೊತೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2016ರಲ್ಲಿ 235, ವಿನೋದ್ ಕಾಂಬ್ಳಿ 1993ರಲ್ಲಿ 224, 1982ರಲ್ಲಿ ಕನ್ನಡಿಗ ಜಿ.ಆರ್.ವಿಶ್ವನಾಥ್ 222 ಮತ್ತು 1979ರಲ್ಲಿ ಸುನೀಲ್ ಗವಾಸ್ಕರ್ 221 ರನ್ ಗಳಿಸಿರುವುದು ಕೂಡ ಅತ್ಯುತ್ತಮ ಇನ್ನಿಂಗ್ಸ್ಗಳಾಗಿವೆ.