ಹೈದರಾಬಾದ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯಗಳ ವೀಕ್ಷಣೆ ಮಾಡಲು ಈಗಾಗಲೇ ಕ್ರೀಡಾಭಿಮಾನಿಗಳಿಗೆ ಅನುಮತಿ ನೀಡಲಾಗಿದೆ. ಆದರೆ ಇದರ ಬೆನ್ನಲ್ಲೇ ಇದೀಗ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ.
ಆಂಗ್ಲರ ವಿರುದ್ಧ ಮಾರ್ಚ್ 23, 26 ಹಾಗೂ 28ರಂದು ಮಹಾರಾಷ್ಟ್ರದ ಪುಣೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಏಕದಿನ ಪಂದ್ಯಗಳನ್ನು ಪ್ರೇಕ್ಷಕರಿಲ್ಲದ ಖಾಲಿ ಮೈದಾನದಲ್ಲಿ ನಡೆಸಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ. ಆದರೆ ಇದರ ಬಗ್ಗೆ ಬಿಸಿಸಿಐ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ಲಂಕಾ ವಿರುದ್ಧದ ಟಿ-20 ಸರಣಿಗೆ ವಿಡೀಸ್ ತಂಡ ಪ್ರಕಟ: ಗೇಲ್, ಫಿಡರ್ಗೆ ಅವಕಾಶ!
ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಕಳೆದ ಕೆಲ ದಿನಗಳಿಂದ ಹೆಚ್ಚಾಗಿದ್ದು, ಕೆಲವೊಂದು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದರ ಮಧ್ಯೆ ಪಂದ್ಯಗಳ ಸ್ಥಳಾಂತರದ ಬಗ್ಗೆ ಸಹ ಮಾತುಗಳು ಕೇಳಿ ಬರುತ್ತಿದ್ದು, ಪುಣೆಯಿಂದ ಮುಂಬೈಗೆ ಈ ಪಂದ್ಯ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ವರದಿಯಾಗಿದೆ.
ನಾಲ್ಕನೇ ಟೆಸ್ಟ್ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಇಂಗ್ಲೆಂಡ್ -ಭಾರತ ನಡುವೆ ಐದು ಟಿ-20 ಪಂದ್ಯಗಳ ಸರಣಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದಾದ ಬಳಿಕ ಮೂರು ಏಕದಿನ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ. ಆದರೆ ಈ ಪಂದ್ಯಗಳನ್ನ ಮುಚ್ಚಿದ ಬಾಗಿಲು(Behind Closed Doors)ಗಳ ಹಿಂದೆ ನಡೆಸಲು ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಒಂದು ವೇಳೆ ಈ ನಿರ್ಧಾರ ಕೈಗೊಂಡರೆ ಕ್ರೀಡಾಭಿಮಾನಿಗಳಿಗೆ ನಿರಾಶೆಯಾಗಲಿದೆ.