ಬ್ರಿಸ್ಬೇನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದ್ದು, ನಾಲ್ಕು ಟೆಸ್ಟ್ಗಳ ನಡೆಯುವ ಸ್ಥಳವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಅಂತಿಮಗೊಳಿಸಿದೆ.
ಕೊರೊನಾ ವೈರಸ್ ಭೀತಿಯಿಂದ ಕಳೆದ ಮಾರ್ಚ್ನಿಂದ ಎರಡು ರಾಷ್ಟ್ರಗಳು ಯಾವುದೇ ಕ್ರಿಕೆಟ್ ಪಂದ್ಯಗಳನ್ನಾಡಿಲ್ಲ. ಬಾರ್ಡರ್-ಗವಾಸ್ಕರ್ ಸರಣಿ ಕೂಡ ನಡೆಯುತ್ತದೆಯಾ ಅಥವಾ ಇಲ್ಲವೇ ಎಂಬ ಚರ್ಚೆ ನಡೆಯುತ್ತಿತ್ತು. ಆದರೆ,ಕ್ರಿಕೆಟ್ ಆಸ್ಟ್ರೇಲಿಯಾ ಸಂಭಾವ್ಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಬಾರ್ಡರ್ ಗವಾಸ್ಕರ್ ಸರಣಿಯ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯ ಬ್ರಿಸ್ಬೇನ್ನಲ್ಲಿ ಡಿಸೆಂಬರ್ 3ರಿಂದ 7ರವರೆಗೆ ನಡೆಯಲಿದೆ. ಎರಡನೇ ಟೆಸ್ಟ್ ಅಡಿಲೇಡ್ನಲ್ಲಿ ಡಿಸೆಂಬರ್ 11ರಿಂದ 15ರವರೆಗೆ ನಡೆಯಲಿದೆ. ಇನ್ನು ಕೊನೆಯ ಎರಡು ಪಂದ್ಯಗಳು ಮೆಲ್ಬೋರ್ನ್ ಹಾಗೂ ಸಿಡ್ನಿಯಲ್ಲಿ ಡಿಸೆಂಬರ್ 26 ಹಾಗೂ ಜನವರಿ 3 ರಂದು ಆರಂಭವಾಗಲಿದೆ ಎಂದು cricket.com.au ವರದಿ ಮಾಡಿದೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ 4 ಪಂದ್ಯಗಳನ್ನು ಒಂದೇ ಸ್ಥಳದಲ್ಲಿ ನಡೆಸಲು ತೀರ್ಮಾನಿಸಿತ್ತು. ಆದರೆ, ಕ್ರಿಕೆಟ್ ಆಸ್ಟ್ರೇಲಿಯಾ ಪ್ರತ್ಯೇಕ ವೇಳಾಪಟ್ಟಿಯನ್ನೇ ಪ್ರಕಟಿಸಿದೆ. ಇನ್ನು ಭಾರತದ ವಿರದ್ದದ ಸರಣಿಗೂ ಮುನ್ನ ಆಸ್ಟ್ರೇಲಿಯಾ ನವೆಂಬರ್ 21 - 25ರವೆಗೆ ಅಫ್ಘಾನಿಸ್ತಾನದ ವಿರುದ್ಧ ಡೇ ಅಂಡ್ ನೈಟ್ ಟೆಸ್ಟ್ ಆಡಲಿದೆ.
ಕಳೆದ ವರ್ಷ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ವೇಳೆ, ಕೊಹ್ಲಿ ಪಡೆ 2-1ರಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.