ನವದೆಹಲಿ: ಭಾರತ-ಪಾಕಿಸ್ತಾನದ ನಡುವಿನ ಕ್ರಿಕೆಟ್ ಪಂದ್ಯ ಯುದ್ಧಕ್ಕಿಂತ ಕಡಿಮೆ ಅಲ್ಲ. ಅದರಲ್ಲಿ ನಾವು ಗೆಲುವು ಸಾಧಿಸಲೇಬೇಕು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಕಪ್ನಲ್ಲಿ ಭಾರತ-ಪಾಕ್ ಜೂನ್ 16ರಿಂದ ಮುಖಾಮುಖಿಯಾಗುತ್ತಿವೆ. ಇದೇ ವಿಷಯವಾಗಿ ಸೆಹ್ವಾಗ್ ಗೋವಾದಲ್ಲಿ ಮಾತನಾಡಿದರು. ಪುಲ್ವಾಮಾ ದಾಳಿ ಆದ ಬಳಿಕ ವಿಶ್ವಕಪ್ನಲ್ಲಿ ಪಾಕ್ ವಿರುದ್ಧದ ಪಂದ್ಯದಿಂದ ಭಾರತ ಹಿಂದೆ ಸರಿಯಬೇಕು ಎಂಬ ಮಾತು ಸಹ ಹೇಳಿದ್ದರು. ಅದಕ್ಕೆ ಗೌತಮ್ ಗಂಭೀರ್ ಕೂಡ ಧ್ವನಿಗೂಡಿಸಿದ್ದರು.
ಇದೀಗ ಮಾತನಾಡಿರುವ ಸೆಹ್ವಾಗ್, ದೇಶದ ಒಳತಿಗಾಗಿ ಏನೆಲ್ಲ ಸಾಧ್ಯವೋ ನಾವು ಅದನ್ನ ಮಾಡಬೇಕು. ಭಾರತ-ಪಾಕಿಸ್ತಾನದ ನಡುವೆ ಯಾವುದೇ ಸಮಯದಲ್ಲಿ ಕ್ರಿಕೆಟ್ ನಡೆದರೂ ಅದು ಯುದ್ಧಕ್ಕಿಂತ ಕಡಿಮೆ ಇರಲ್ಲ. ಅದರಲ್ಲಿ ನಾವು ಗೆಲುವು ಕಾಣಲೇಬೇಕು ಎಂದಿದ್ದಾರೆ.
ಏಕದಿನ ವಿಶ್ವಕಪ್ ಇಂಗ್ಲೆಂಡ್ನಲ್ಲಿ ನಡೆಯಲಿದ್ದು, ಮೇ 30ರಿಂದ ಜುಲೈ 14ರವರೆಗೆ ಈ ಮಹಾ ಟೂರ್ನಿ ನಡೆಯಲಿದೆ. ಎಲ್ಲ ತಂಡಗಳು 9 ಪಂದ್ಯಗಳನ್ನಾಡಲಿವೆ. ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ವೀರೂ, ನಾನು ರಣಜಿ ಹಾಗೂ ಐಪಿಎಲ್ನಲ್ಲಿ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡಿರುವೆ. ಈಗ ಯಾವ ಪಕ್ಷ ಉತ್ತಮ ಒಪ್ಪಂದ ಮಾಡಿಕೊಳ್ಳುತ್ತದೆಯೋ ಅದರೊಂದಿಗೆ ಕೆಲಸ ಮಾಡಲು ಸಿದ್ಧ ಎಂದಿದ್ದಾರೆ.