ಹೈದರಾಬಾದ್: ದೇಶದಲ್ಲಿ ಇದೀಗ ಅನ್ಲಾಕ್ 1 ಜಾರಿಯಲ್ಲಿದ್ದು, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟ ನಡೆಸಲು ಯಾವುದೇ ಅನುಮತಿ ನೀಡಿಲ್ಲ. ಆದರೂ ಕ್ರೀಡಾಪಟುಗಳು ಮೈದಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಅಭ್ಯಾಸ ಆರಂಭಿಸುತ್ತಿದ್ದಾರೆ.
ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಹಾಗೂ ಟೆಸ್ಟ್ ಕ್ರಿಕೆಟ್ನ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಚೇತೇಶ್ವರ್ ಪೂಜಾರ ಇದೀಗ ಮೈದಾನಕ್ಕಿಳಿದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಅಭ್ಯಾಸ ಆರಂಭಿಸಿದ್ದಾರೆ. ಈ ಬಗ್ಗೆ ವೇಗಿ ಶರ್ಮಾ ಇನ್ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಮೈದಾನದಲ್ಲಿ ಇಂದಿನಿಂದ ನೆಟ್ ಪ್ರ್ಯಾಕ್ಟೀಸ್ ಆರಂಭಿಸಿರುವ ಇಶಾಂತ್, ಸಾಮಾಜಿಕ ಅಂತರದೊಂದಿಗೆ ಅಭ್ಯಾಸ ಆರಂಭ ಮಾಡಿದ್ದಾಗಿ ಬರೆದುಕೊಂಡಿದ್ದಾರೆ. ಜತೆಗೆ ಪಾಸಿಟಿವ್ ಆಗಿರಿ ಎಂದು ಇತರರಿಗೆ ಸಂದೇಶ ರವಾನಿಸಿದ್ದಾರೆ.
ಟೀಂ ಇಂಡಿಯಾ ಪರ 97 ಟೆಸ್ಟ್ ಪಂದ್ಯ ಆಡಿರುವ ಇಶಾಂತ್ 297 ವಿಕೆಟ್ ಪಡೆದುಕೊಂಡಿದ್ದು, ಈ ಸಲದ ಅರ್ಜುನ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. 31 ವರ್ಷದ ಇಶಾಂತ್ ಸದ್ಯ ಟೀಂ ಇಂಡಿಯಾದ ಪ್ರಮುಖ ಬೆಸ್ಟ್ ಬೌಲರ್ಗಳಲ್ಲಿ ಒಬ್ಬರಾಗಿದ್ದು, ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಲು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ.