ಮುಂಬೈ : ಕೊರೊನಾ ಸಾಂಕ್ರಾಮಿಕ ವೈರಸ್ ಭೀತಿಯಿಂದ ಮಾರ್ಚ್ನಲ್ಲಿ ನಡೆಯಬೇಕಿದ್ದ ಐಪಿಎಲ್ ಮುಂದೂಡಲ್ಪಟ್ಟಿದೆ. ಆದರೆ, ಬಿಸಿಸಿಐ ಆಧ್ಯಕ್ಷ ಸೌರವ್ ಗಂಗೂಲಿ ಐಪಿಎಲ್ ಇಲ್ಲದೆ 2020 ಮುಗಿಯಲು ನಾನು ಭಯಸುವುದಿಲ್ಲ ಎಂದು ಹೇಳಿದ್ದಾರೆ.
ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ನ 13ನೇ ಆವೃತ್ತಿಯನ್ನು ಈ ವರ್ಷಾಂತ್ಯದೊಳಗೆ ಆಯೋಜಿಸುವುದು ನಮ್ಮ ಗುರಿ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ. "ಐಪಿಎಲ್ ಇಲ್ಲದೆ 2020ರ ವರ್ಷ ಮುಗಿಯುವುದನ್ನು ನಾವು ಬಯಸುವುದಿಲ್ಲ. ಲೀಗ್ ಆಯೋಜಿಸಲು ನಮ್ಮ ಮೊದಲ ಆದ್ಯತೆ ಭಾರತ ಮತ್ತು ನಮಗೆ 35 ರಿಂದ 40 ದಿನಗಳು ಸಿಕ್ಕರೂ ಐಪಿಎಲ್ ಆಯೋಜಿಸುತ್ತೇವೆ. ಆದರೆ, ಎಲ್ಲಿ ಆಯೋಜಿಸುತ್ತೇವೆ ಎಂದು ಗೊತ್ತಿಲ್ಲ.." ಎಂದು ಗಂಗೂಲಿ ಇಂಡಿಯಾ ಟುಡೇಯ ಇನ್‌ಸ್ಪಿರೇಶನ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ವಿದೇಶದಲ್ಲಿ ಟೂರ್ನಿ ಆಯೋಜನೆ ಮಾಡಬೇಕೆಂಬುದು ಕೇವಲ ಆಯ್ಕೆ ಮಾತ್ರ. ವಿದೇಶದಲ್ಲಿ ಆಯೋಜನೆ ಮಾಡಿದರೆ ಖರ್ಚು ದುಬಾರಿಯಾಗಲಿದೆ, ಅದು ಪ್ರಾಂಚೈಸಿಗಳಿಗಾಗಿರಬಹುದು ಅಥವಾ ಬೋರ್ಡ್ಗಾಗಬಹುದು. ಯಾಕೆಂದರೆ, ಕರೆನ್ಸಿ ಬದಲಾವಣೆಯಾಗುವುದರಿಂದ ದುಬಾರಿಯಾಗಲಿದೆ. ಹೀಗಾಗಿ ಐಪಿಎಲ್ ಕುರಿತು ದಿಢೀರ್ ನಿರ್ಧಾರ ಕೈಗೊಳ್ಳಲಾಗದು ಎಂದು ಅವರು ಹೇಳಿದ್ದಾರೆ.
ಈಗಾಗಲೆ ಯುಎಇ, ಶ್ರೀಲಂಕಾ ಹಾಗೂ ಇತ್ತೀಚೆಗೆ ನ್ಯೂಜಿಲ್ಯಾಂಡ್ ಕ್ರಿಕೆಟ್ ಬೋರ್ಡ್ಗಳು ತಾ ಮುಂದು, ನಾ ಮುಂದು ಎಂದು ಮಿಲಿಯನ್ ಡಾಲರ್ ಟೂರ್ನಿಯನ್ನು ಆಯೋಜನೆ ಮಾಡಲು ಆಫರ್ ನೀಡುತ್ತಿವೆ. ಆದರೆ, ಬಿಸಿಸಿಐ ಮಾತ್ರ ನಮ್ಮ ದೇಶದಲ್ಲಿ ಆಯೋಜಿಸಲು ಮೊದಲ ಆದ್ಯತೆ ಎನ್ನುತ್ತಿದೆ. ಆದರೆ, ಭಾರತದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಲ್ಲಿ ಆಯೋಜಿಸುವುದು ನಿಜಕ್ಕೂ ಕಷ್ಟಸಾಧ್ಯವಾಗಿದೆ.