ಟ್ರೆನಿಟಾಡ್: ಕರ್ನಾಟಕದ ಆಟಗಾರರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ಎ ತಂಡ ವಿಂಡೀಸ್ ಎ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ ಇನ್ನಿಂಗ್ಸ್ನಲ್ಲಿ ವಿಂಡೀಸ್ 318 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 190 ರನ್ಗಳಿಗೆ ಆಲೌಟ್ ಆಗುವ ಮೂಲಕ 128 ರನ್ಗಳ ಇನ್ನಿಂಗ್ಸ್ ಹಿನ್ನೆಡೆ ಅನುಭವಿಸಿತು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ಕನ್ನಡಿಗ ಕೆ. ಗೌತಮ್ ಕೇವಲ 17 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾಥ್ ನೀಡಿದ ಸಂದೀಪ್ ವಾರಿಯರ್ 3 ವಿಕೆಟ್ ಪಡೆದು ವಿಂಡೀಸ್ ತಂಡವನ್ನು 149 ರನ್ಗಳಿಗೆ ಆಲೌಟ್ ಆಗುವಂತೆ ನೋಡಿಕೊಂಡರು.
278 ರನ್ಗಳ ಗುರಿ ಬೆನ್ನತ್ತಿರುವ ಭಾರತ ತಂಡ 3 ವಿಕೆಟ್ ಕಳೆದುಕೊಂಡು 7 ವಿಕೆಟ್ಗಳ ಜಯ ಸಾಧಿಸಿತು. ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ಮಯಾಂಕ್ ಅಗರ್ವಾಲ್ 134 ಎಸೆತಗಳಲ್ಲಿ 10 ಬೌಂಡರಿ ಸಮೇತ 81 ರನ್ ಗಳಿಸಿ ಔಟ್ ಆದ್ರು. ಮತ್ತೋರ್ವ ಆರಂಭಿಕ ಬ್ಯಾಟ್ಸ್ಮನ್ ಪ್ರಿಯಾಂಕ್ ಪಾಂಚಾಲ್ 68 ರನ್ ಗಳಿಸಿದರು. ನಾಯಕ ಹನುಮ ವಿಹಾರಿ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ 4 ನೇ ವಿಕೆಟ್ ಜೊತೆಯಾಟದಲ್ಲಿ ಅಭಿಮನ್ಯು ಈಶ್ವರನ್(62 ರನ್), ಅನ್ಮೋಲ್ಪ್ರೀತ್ ಸಿಂಗ್(51 ರನ್) 101 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಏಕದಿನ ಸರಣಿಯನ್ನು 4-1ರಲ್ಲಿ ವಶಪಡಿಸಿಕೊಂಡಿದ್ದ ಭಾರತ ತಂಡ ಟೆಸ್ಟ್ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ 2-0ಯಲ್ಲಿ ವಶಪಡಿಸಿಕೊಂಡಿದೆ.