ಚೆನ್ನೈ:ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹೇಗೆ ಔಟ್ ಮಾಡುವುದು ಎಂಬುದು ನನಗೆ ಗೊತ್ತಿಲ್ಲ, ಏಕೆಂದರೆ ಅವರೊಬ್ಬ ವಿಶ್ವಶ್ರೇಷ್ಠ ಕ್ರಿಕೆಟಿಗನಾಗಿದ್ದು, ಅವರಿಗೆ ಯಾವುದೇ ರೀತಿಯ ವೀಕ್ನೆಸ್ ಇಲ್ಲ ಎಂದು ಇಂಗ್ಲೆಂಡ್ ಆಲ್ರೌಂಡರ್ ಮತ್ತು ಆರ್ಸಿಬಿ ಮಾಜಿ ಆಟಗಾರನಾಗಿರುವ ಮೋಯಿನ್ ಅಲಿ ತಿಳಿಸಿದ್ದಾರೆ.
ಇಂಗ್ಲೆಂಡ್ ತಂಡ ಭಾರತದ ವಿರುದ್ಧ 4 ಟೆಸ್ಟ್, 5 ಟಿ20 ಮತ್ತು 3 ಏಕದಿನ ಪಂದ್ಯಗಳನ್ನಾಡಲು ಭಾರತಕ್ಕೆ ಪ್ರವಾಸ ಕೈಗೊಂಡಿದೆ. ಫೆಬ್ರವರಿ 5ರಿಂದ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪ್ರಾರಂಭವಾಗಲಿದೆ. ಆಸ್ಟ್ರೇಲಿಯಾ ವಿರುದ್ಧ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಂದ ಹೊರಬಂದಿದ್ದ ವಿರಾಟ್ ಕೊಹ್ಲಿ ಮತ್ತೆ ಭಾರತ ತಂಡ ಸೇರಿಕೊಂಡಿದ್ದು, ಭಾರತ ತಂಡ ಬಲಿಷ್ಠವಾಗಿದೆ ಎಂದು ಅಲಿ ಅಭಿಪ್ರಾಯಪಟ್ಟಿದ್ದಾರೆ.
"ನಾವು ಅವರನ್ನು(ಕೊಹ್ಲಿ) ಹೇಗೆ ಔಟ್ ಮಾಡಬೇಕು? ಆತನೊಬ್ಬ ಅದ್ಭುತ ಆಟಗಾರ, ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಹಾಗೂ ಇತರರನ್ನು ಅತ್ಯುತ್ತಮವಾಗಿ ಕೆಲಸ ಮಾಡಲು ಪ್ರೇರೇಪಿಸುತ್ತಾರೆ. ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿ ಗೆದ್ದ ಮೇಲಂತೂ ಅವರು ಇನ್ನು ಹೆಚ್ಚಿನ ರೀತಿಯಲ್ಲಿ ಪ್ರೇರೇಪಿಸುತ್ತಾರೆ ಎಂಬುದು ನನಗೆ ಖಾತ್ರಿಯಿದೆ" ಎಂದು ವಿಡಿಯೋ ಕಾನ್ಫರೆನ್ಸ್ನಲ್ಲಿ ಮೋಯಿನ್ ಅಲಿ ಹೇಳಿದ್ದಾರೆ.
ಆದರೆ ಅವರನ್ನು ಔಟ್ ಮಾಡಲು ನಾವು ಹೇಗೆ ಹೋಗಬೇಕೆಂದು ನನಗೆ ತಿಳಿದಿಲ್ಲ. ಏಕೆಂದರೆ ಅವರಿಗೆ ಯಾವುದೇ ರೀತಿಯ ದೌರ್ಬಲ್ಯವಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ ನಮ್ಮಲ್ಲಿ ಉತ್ತಮ ಬೌಲಿಂಗ್ ದಾಳಿಯಿದೆ. ಮತ್ತು ವೇಗದ ಬೌಲರ್ಗಳಿದ್ದಾರೆ ನೋಡೋಣ ಎಂದಿರುವ ಅವರು, ಕೊಹ್ಲಿಯನ್ನು ಅದ್ಭುತ ವ್ಯಕ್ತಿ ಮತ್ತು ನನ್ನ ಅತ್ಯುತ್ತಮ ಸ್ನೇಹಿತರಲ್ಲಿ ಒಬ್ಬ ಎಂದು ತಿಳಿಸಿದ್ದಾರೆ.
ಇದನ್ನು ಓದಿ:ಕೊಹ್ಲಿ vs ರೂಟ್.. ನಾಯಕರ ನಡುವಿನ ಕಾದಾಟದಲ್ಲಿ ಗೆಲ್ಲೋರ್ಯಾರು?