ಮುಂಬೈ: ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡದ ನಾಯಕನಾಗಿರುವ ರಹಾನೆ ಮುಂದಿನ ಪಂದ್ಯಗಳಲ್ಲಿ ತಾವಾಗಿಯೇ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆಯದಿದ್ದರೆ ಅದು ನಿಜಕ್ಕೂ ಅಚ್ಚರಿಯೇ ಸರಿ ಎಂದು ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಿಂದ ಪಿತೃತ್ವ ರಜೆ ಮೇರೆಗೆ ವಿರಾಟ್ ಕೊಹ್ಲಿ ಹೊರ ಬಂದಿದ್ದಾರೆ. ಹಾಗಾಗಿ ಮುಂಬರುವ 3 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ರಹಾನೆ ಮುನ್ನಡೆಸಲಿದ್ದಾರೆ. 5ನೇ ಕ್ರಮಾಂಕದಲ್ಲಿ ಆಡುವ ರಹಾನೆ, ಕೊಹ್ಲಿ ಅನುಪಸ್ಥಿತಿಯಲ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕೆಂದು ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಭ್ಯರ್ಥಿಯಾಗಿರುವ ಅಗರ್ಕರ್ ಹೇಳಿದ್ದಾರೆ.
ಕೊಹ್ಲಿ ಗೈರಿನಲ್ಲಿ ರಹಾನೆ ಸ್ವತಃ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರು ಅನುಭವಿ, ಅಲ್ಲದೆ ವಿದೇಶಗಳಲ್ಲಿ ಸಾಕಷ್ಟು ರನ್ ಗಳಿಸಿದ್ದಾರೆ. ನಾಯಕ ತಂಡವನ್ನು ಮುಂದೆ ನಡೆಸಲು ಇದು ಸುಸಮಯ. ಅವರೇನಾದರೂ ನಾಲ್ಕನೇ ಕ್ರಮಾಂಕದಲ್ಲಿ ಆಡದಿದ್ದರೆ ಖಂಡಿತಾ ನನಗೆ ಆಶ್ಚರ್ಯವಾಗಲಿದೆ. ಜೊತೆಗೆ ಶುಬ್ಮನ್ ಗಿಲ್ ಕೂಡ ಆಡಬೇಕು. ಅವರು ಪಂಜಾಬ್ ಪರ ಇನ್ನಿಂಗ್ಸ್ ಆರಂಭಿಸುವುದನ್ನು ನಾನು ನೋಡಿದ್ದೇನೆ. ಅವರಂತಹ ಆಟಗಾರ ಉತ್ತಮವಾಗಿ ಆಡಿದರೆ ಅವರು ಭಾರತ ತಂಡಕ್ಕಾಗಿ ದೀರ್ಘಾವಧಿ ಸಮಯ ಆಡಲಿದ್ದಾರೆ ಎಂದು ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ:ರಹಾನೆ ಸ್ವಭಾವ ಆಕ್ರಮಣಕಾರಿಯಲ್ಲ ಎಂದು ಭಾವಿಸಿದರೆ ತಪ್ಪಾಗುತ್ತದೆ: ಸಚಿನ್
ಮೊದಲ ಪಂದ್ಯದಲ್ಲಿ ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಉತ್ತಮವಾಗಿ ಆಡಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 36 ರನ್ಗಳಿಗೆ ಆಲೌಟ್ ಆಗುವ ಮೂಲಕ ಕಳಪೆ ದಾಖಲೆ ಸೃಷ್ಟಿಸಿತ್ತು. ಕೇವಲ 90 ರನ್ಗಳ ಟಾರ್ಗೆಟ್ ನೀಡಿ, 8 ವಿಕೆಟ್ಗಳ ಸೋಲು ಕಂಡಿತ್ತು. ಡಿಸೆಂಬರ್ 26ರಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಮುಖಾಮುಖಾಯಾಗಲಿವೆ.