ಸಿಡ್ನಿ: ಭಾರತ ವಿರುದ್ಧದ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದ್ದಕ್ಕೆ ಆಸೀಸ್ ನಾಯಕ ಟಿಮ್ ಪೇನ್ ಬೇಸರ ವ್ಯಕ್ತಪಡಿಸಿದ್ದಾರೆ. ಪಂದ್ಯ ಗೆಲ್ಲುವ ಅವಕಾಶ ಹೆಚ್ಚಿದ್ದರೂ, ಕೆಲವು ತಪ್ಪುಗಳಿಂದ ಡ್ರಾನಲ್ಲಿ ಅಂತ್ಯವಾಯಿತು ಎಂದು ಅವರು ಹೇಳಿದರು.
407 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಭಾರತ 131 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 334 ರನ್ಗಳಿಸಿತು. ರಿಷಭ್ ಪಂತ್ (97), ಪೂಜಾರ (77) ಹಾಗೂ ಅಶ್ವಿನ್ (39) ಹಾಗೂ ವಿಹಾರಿ ನೀಡಿ ಅತ್ಯುತ್ತಮ ಇನ್ನಿಂಗ್ಸ್ ಆಡಿ ಪಂದ್ಯವನ್ನು ಡ್ರಾಗೊಳ್ಳುವಂತೆ ಮಾಡಿದರು.
ನಿರ್ಣಾಯಕವಾಗಿದ್ದ ಕೊನೆಯ ದಿನ ಆಸ್ಟ್ರೇಲಿಯಾ ಕೇವಲ 3 ವಿಕೆಟ್ಗಳನ್ನು ಪಡೆಯಲು ಮಾತ್ರ ಸಫಲವಾಯಿತು. ಆದರೆ ಬೌಲರ್‌ಗಳು ಹಲವಾರು ಅವಕಾಶ ಮಾಡಿಕೊಟ್ಟರೂ ನಾಯಕ ಟಿಮ್ ಪೇನ್ ಸಹಿತ ಫೀಲ್ಡರ್ಗಳು ಅನೇಕ ಕ್ಯಾಚ್ ಚೆಲ್ಲಿದರು.
"ನಾವು ಈ ಪಂದ್ಯವನ್ನು ಗೆಲ್ಲುವಷ್ಟು ಪೂರಕವಾದ ಸಾಕಷ್ಟು ಸಂದರ್ಭಗಳನ್ನು ಸೃಷ್ಟಿಸಿಕೊಂಡಿದ್ದೆವು. ಆದರೆ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ವಿಚಾರ ಅರಗಿಸಿಕೊಳ್ಳುವುದು ತುಂಬಾ ಕಷ್ಟ. ನಮ್ಮ ಬೌಲರ್‌ಗಳು ಅದ್ಭುತವಾಗಿ ಬೌಲಿಂಗ್ ಮಾಡಿದರು. ಅದರಲ್ಲೂ ಲಿಯಾನ್ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ನಾವು (ವಿಶೇಷವಾಗಿ ನಾನು) ಕ್ಯಾಚ್‌ಗಳನ್ನು ಪಡೆಯುವಲ್ಲಿ ವಿಫಲರಾದೆವು" ಎಂದು ಟಿಮ್ ಪೇನ್ ಬೇಸರ ವ್ಯಕ್ತಪಡಿಸಿದ್ದಾರೆ.
"ನಾವು ಕಳೆದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನು ನೀಡಿಲ್ಲ. ಆದರೆ ಈ ಪಂದ್ಯದಲ್ಲಿ ನಾವು ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇವೆ. ಆ ಇಬ್ಬರು(ವಿಲ್ ಪುಕೋವ್ಸ್ಕಿ ಮತ್ತು ಗ್ರೀನ್) ಟೆಸ್ಟ್ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ನಮ್ಮ ಗುರಿ ಏನಿದ್ದರೂ ಬ್ರಿಸ್ಬೇನ್ ಟೆಸ್ಟ್ ಕಡೆ" ಎಂದು ಟಿಮ್ ಪೇನ್ ಪಂದ್ಯ ಮುಗಿದ ನಂತರ ನಡೆದ ವರ್ಚುವಲ್ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: 'ನಿಮ್ಮನ್ನು ಭಾರತಕ್ಕೆ ಕರೆದೊಯ್ಯಲು ಬಯಸುತ್ತೇನೆ; ಅದು ನಿಮ್ಮ ಕೊನೆಯ ಸರಣಿಯಾಗ್ಬಹುದು': ಪೈನ್ಗೆ ಅಶ್ವಿನ್ ತಿರುಗೇಟು