ಸಿಡ್ನಿ: ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ವೇಳೆ ಡಿಆರ್ಎಸ್ ಮನವಿಯಲ್ಲಿ ತಮ್ಮ ಪರ ಫಲಿತಾಂಶ ಬಾರದಿದ್ದ ಸಮಯದಲ್ಲಿ ಆಸೀಸ್ ನಾಯಕ ಟಿಮ್ ಪೇನ್ ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಥನ್ ಲಿಯಾನ್ ಬೌಲಿಂಗ್ ವೇಳೆ ಈ ಘಟನೆ ನಡೆದಿದೆ. ವೇಡ್ ಹಿಡಿದ ಕ್ಯಾಚ್ಗೆ ಚೇತೇಶ್ವರ್ ಪೂಜಾರ ಔಟ್ ಆಗಿದ್ದಾರೆ ಎಂದು ಆಸೀಸ್ ಆಟಗಾರರು ಬಲವಾದ ಮನವಿ ಮಾಡಿದ್ರು. ಆದ್ರೆ ಆನ್-ಫೀಲ್ಡ್ ಅಂಪೈರ್ ಮನವಿಯನ್ನು ತಿರಸ್ಕರಿಸಿದ್ರು.
ಆತಿಥೇಯರು ಈ ನಿರ್ಧಾರವನ್ನು ಪರಿಶೀಲಿಸಲು ನಿರ್ಧರಿಸಿದರು. ಮೂರನೇ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್, ಯಾವುದೇ ನಿರ್ಣಾಯಕ ಪುರಾವೆಗಳು ಸಿಗದ ಕಾರಣ ಅಂಪೈರ್ಸ್ ಕಾಲ್ನಿಂದಾಗಿ ನಾಟ್ಔಟ್ ಎಂದು ಘೋಷಿಸಿದ್ರು.
ಈ ವೇಳೆ ಪೇನ್ ತಾಳ್ಮೆ ಕಳೆದುಕೊಂಡು ಆನ್-ಫೀಲ್ಡ್ ಅಂಪೈರ್ ವಿಲ್ಸನ್ ಜೊತೆ ವಾದಕ್ಕಿಳಿದರು. ಮೂರನೇ ಅಂಪೈರ್ ಕೇವಲ ಲೆಗ್-ಸೈಡ್ ನೋಡುವುದಕ್ಕಿಂತ ಹೆಚ್ಚಾಗಿ ಆಫ್-ಸೈಡ್ ಹಾಟ್ ಸ್ಪಾಟ್ ಅನ್ನು ಪರೀಕ್ಷಿಸುವ ಅಗತ್ಯವಿದೆ ಎಂದು ಪೇನ್ ಹೇಳಿರುವುದು ಸ್ಟಂಪ್ ಮೈಕ್ನಲ್ಲಿ ರೆಕಾರ್ಡ್ ಆಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಮೂರನೇ ಅಂಪೈರ್ ತೀರ್ಮಾನ ನೀಡಿ ಆಗಿದೆ, ನೀನು ನನಗೇನು ಹೇಳಬೇಡ ಎಂದು ಅಂಪೈರ್ ಪೇನ್ಗೆ ಹೇಳುತ್ತಿರುವುದನ್ನು ಕೂಡ ಕೇಳಬಹುದಾಗಿದೆ.
ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಅಂಪೈರ್ ನಿರ್ಧಾರದಲ್ಲಿ ಭಿನ್ನಾಭಿಪ್ರಾಯವನ್ನು ತೋರಿಸುವುದಕ್ಕೆ ಸಂಬಂಧಿಸಿದಂತೆ. ಪೇನ್ ಅವರ ವರ್ತನೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ನ ನೀತಿ ಸಂಹಿತೆಯ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ.