ನವದೆಹಲಿ: ಭಾರತ ತಂಡದ ಸ್ಫೋಟಕ ಆಟಗಾರ ಸೆಹ್ವಾಗ್ಗಿಂತ ಪಾಕಿಸ್ತಾನದ ಇಮ್ರಾನ್ ನಜೀರ್ ಪ್ರತಿಭಾವಂತ ಎಂದು ಹೇಳುವ ಮೂಲಕ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 2 ತ್ರಿಶತಕ, ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಹಾಗೂ ಮೂರು ಮಾದರಿಯ ಕ್ರಿಕೆಟ್ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್ಗಳನ್ನು ಬೆದರಿಸುತ್ತಿದ್ದ ಸೆಹ್ವಾಗ್ಗಿಂತಲೂ ಒಂದು ಮಾದರಿಯ ಕ್ರಿಕೆಟ್ನಲ್ಲಿ 100 ಪಂದ್ಯವಾಡದ ಇಮ್ರಾನ್ ನಜೀರ್ರನ್ನು ಹೋಲಿಕೆ ಮಾಡಿ ಭಾರತೀಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸೆಹ್ವಾಗ್ ಅವರಿಗಿದ್ದ ಸಾಮರ್ಥ್ಯ, ಇಮ್ರಾನ್ ನಜೀರ್ ಹೊಂದಿದ್ದರೆಂದು ನಾನು ಭಾವಿಸುವುದಿಲ್ಲ, ಅದೇ ರೀತಿ ನಜೀರ್ ಹೊಂದಿದ್ದ ಪ್ರತಿಭೆಯನ್ನು ಸೆಹ್ವಾಗ್ ಹೊಂದಿರಲಿಲ್ಲ. ಪ್ರತಿಭೆಗೆ ಸಂಬಂಧಿಸಿದಂತೆ ಯಾವುದೇ ಹೋಲಿಕೆಯಿಲ್ಲ. ಭಾರತದ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದಾಗ, ನಾನು ನಜೀರ್ರನ್ನು ಅದೇ ಬ್ಯಾಟಿಂಗ್ ಲಯವನ್ನು ಮುಂದುವರೆಸುವಂತೆೆ ತಿಳಿಸಿದ್ದೆ, ಆದರೆ ಅವರು ಕೇಳಲಿಲ್ಲ ಎಂದು ಪಾಕಿಸ್ತಾನದ ಟಿವಿ ಶೋ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನಮ್ಮ ಬ್ರಾಂಡ್ಗಳನ್ನು ಹೇಗೆ ನೋಡಿಕೊಳ್ಳಬೇಕೆಂದು ನಮಗೆ ತಿಳಿಯದಿರುವುದು ದುರದೃಷ್ಟಕರ. ಇಮ್ರಾನ್ ನಜೀರ್ ಉತ್ತಮ ಪ್ರತಿಭೆ, ಅತನನ್ನು ಸರಿಯಾಗಿ ನೋಡಿಕೊಂಡಿದ್ದರೆ ಸೆಹ್ವಾಗ್ಗಿಂತ ಉತ್ತಮ ಆಟಗಾರನನ್ನು ನಾವು ಹೊಂದಬಹುದಿತ್ತು. ಅವರು ಎಲ್ಲಾ ಹೊಡೆತಗಳನ್ನು ಉತ್ತಮ ಫೀಲ್ಡರ್ ಕಡೆಗೆ ಬಾರಿಸುತ್ತಿದ್ದರು. ನಾವು ಅವರನ್ನು ಅದ್ಭುತವಾಗಿ ಬಳಸಿಕೊಳ್ಳಬಹುದಿತ್ತು. ಆದರೆ ನಮಗೆ ಅದು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ನಜೀರ್ ಪಾಕಿಸ್ತಾನ ತಂಡಕ್ಕೆ 1999 ರಲ್ಲಿ ಪದಾರ್ಪಣೆ ಮಾಡಿದ್ದರು. ಈ ವೇಳೆ 8 ಟೆಸ್ಟ್, 79 ಏಕದಿನ ಹಾಗೂ ಜ25 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದು, ಕ್ರಮವಾಗಿ 427,2895 ಹಾಗೂ 500 ರನ್ ಬಾರಿಸಿದ್ದರು.