ಸಿಡ್ನಿ: ಭಾರತ ಮಹಿಳಾ ತಂಡ ವಿಶ್ವದ ಯಾವುದೇ ತಂಡದ ಮೇಲೆ ಒತ್ತಡ ಹೇರುವ ಸಾಮರ್ಥ್ಯ ಹೊಂದಿದೆ ಎಂದು ಭಾರತ ಕ್ರಿಕೆಟ್ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ನಲ್ಲಿ ಭಾಗವಹಿಸುತ್ತಿರುವ ಭಾರತದ ಪ್ರಸ್ತುತ ತಂಡದಲ್ಲಿ ಧನಾತ್ಮಕ ಗುಣ ಹೆಚ್ಚಾಗಿರುವುದೇ ತಂಡದ ಬಲವಾಗಿದೆ. ನಾವು ನಾಲ್ಕು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲು ಕಾತರದಿಂದ ಕಾಯುತ್ತಿದ್ದೇವೆ ಎಂದು ಹರ್ಮನ್ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
"ಮೊದಲ ಪಂದ್ಯ ಎಂಬ ಭಯ ಅಥವಾ ಒತ್ತಡವವಿಲ್ಲ. ನಾವು ಉದ್ಘಾಟನಾ ಪಂದ್ಯಕ್ಕಾಗಿ ಉತ್ಸುಕತೆಯಿಂದ ಕಾಯುತ್ತಿದ್ದೇವೆ ಹಾಗೂ ಧನಾತ್ಮಕ ಫಲಿತಾಂಶದ ಕಡೆ ಎದುರು ನೋಡುತ್ತಿದ್ದೇವೆ. ನಮ್ಮ ತಂಡ ವಿಶ್ವದ ಯಾವುದೇ ತಂಡವನ್ನಾದರೂ ಒತ್ತಡಕ್ಕೆ ಸಿಲುಕಿಸುವ ಸಾಮರ್ಥ್ಯ ಹೊಂದಿದೆ. ಇದು ನಮ್ಮ ತಂಡದ ಬಹುದೊಡ್ಡ ಬಲ" ಎಂದು ಹರ್ಮನ್ ಹೇಳಿದ್ದಾರೆ.
ಇನ್ನು ಬಿಗ್ಬ್ಯಾಶ್ನಲ್ಲಿ ಆಡಿದ ಅನುಭವ ಇರುವುದರಿಂದ ಸಿಡ್ನಿ ಮೈದಾನ ತಮ್ಮ ತಂಡಕ್ಕೆ ಸೂಕ್ತವಾಗಿದೆ ಎಂದು ಭಾವಿಸಿದ್ದೇನೆ. ಪ್ರಸ್ತುತ ಭಾರತ ತಂಡ ಕೂಡ ಇಂತಹ ಮೈದಾನದಲ್ಲಿ ಆಡುವುದಕ್ಕೆ ಎದುರು ನೋಡುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೊಡ್ಡ ಮಟ್ಟದ ಬೆಂಬಲದ ನಿರೀಕ್ಷೆ
ಈಗಾಗಲೇ ಭಾರತದಾದ್ಯಂತ ನಾವು ಎಲ್ಲೇ ಆಡಿದರೂ ತುಂಬಾ ಅಭಿಮಾನಿಗಳು ನಮ್ಮ ಪಂದ್ಯಗಳನ್ನು ನೋಡಲು ಹಾಗೂ ಬೆಂಬಲಿಸಲು ಮೈದಾನಕ್ಕೆ ಬರುತ್ತಿದ್ದಾರೆ. ಪ್ರತಿಯೊಬ್ಬರು ಕ್ರಿಕೆಟ್ ಪ್ರೀತಿಸುವುದರಿಂದ ಈ ಬಾರಿಯೂ ನಾವು ಸಾಕಷ್ಟು ಬೆಂಬಲ ನಿರೀಕ್ಷೆ ಮಾಡಿದ್ದೇವೆ ಎಂದಿದ್ದಾರೆ.
ಶುಕ್ರವಾರ ಭಾರತ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದೆ. ಭಾರತದ ಪರ 15 ವರ್ಷದ ಶೆಫಾಲಿ ವರ್ಮಾ ಹಾಗೂ ಆಸ್ಟ್ರೇಲಿಯಾ ಪರ ಅನ್ನಾಬೆಲ್ ಸದರ್ಲೆಂಡ್ ತಮ್ಮ ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದು, ಎಲ್ಲರ ಆಕರ್ಷಣೆಯಾಗಿದ್ದಾರೆ.