ಲಂಡನ್: ವಿಶ್ವದೆಲ್ಲೆಡೆ ಕೊರೊನಾ ವೈರಸ್ ತಾಂಡವವಾಡುತ್ತಿದ್ದು, ಕ್ರಿಕೆಟ್ ಸೇರಿದಂತೆ ಹಲವಾರು ಕ್ರೀಡೆಗಳು ಸ್ಥಗಿತಗೊಂಡಿವೆ. ಕ್ರೀಡಾಕೂಟಗಳು ಮುಂದೂಡಲ್ಪಟ್ಟಿವೆ. ಈ ವಿಚಾರವಾಗಿ ನಾಳೆ ಐಸಿಸಿ ಸಭೆ ಕರೆದಿದ್ದು, ಇದರಲ್ಲಿ ಮಹತ್ವದ ವಿಚಾರ ಕುರಿತು ಚರ್ಚಿಸಲಾಗುತ್ತದೆ.
ಏಪ್ರಿಲ್ 23 ಗುರುವಾರದಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಐಸಿಸಿ ಸಭೆ ನಡೆಸಲಿದ್ದು, ಇದರಲ್ಲಿ 12 ಕ್ರಿಕೆಟ್ ಮಂಡಳಿಯ ಸಿಇಒಗಳು ಹಾಗೂ 3 ಅಸೋಸಿಯೇಟ್ ರಾಷ್ಟ್ರಗಳ ಸಿಇಒಗಳು ಭಾಗವಹಿಸಲಿದ್ದಾರೆ.
ಸಭೆಯಲ್ಲಿ ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾ ಸಾಂಕ್ರಾಮಿಕದಿಂದ ಕ್ರಿಕೆಟ್ ಕ್ಷೇತ್ರದ ಮೇಲೆ ಆಗಿರುವ ಪರಿಣಾಮ ಹಾಗೂ ಹಲವು ದ್ವಿಪಕ್ಷೀಯ ಸರಣಿಗಳ ಮುಂದೂಡಿಕೆ ಹಾಗೂ 2023ರ ವರೆಗಿನ ಕ್ರಿಕೆಟ್ ಕ್ಯಾಲೆಂಡರ್ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಇನ್ನು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್, ಕ್ರಿಕೆಟ್ ವಿಶ್ವಕಪ್ ಕಪ್ ಸೂಪರ್ ಲೀಗ್, ಐಸಿಸಿ ಗ್ಲೋಬಲ್ ಇವೆಂಟ್ಗಳ ಕುರಿತು ಚರ್ಚೆ ನಡೆಯಲಿದೆ.
ಮುಂದಿನ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಪ್ರಮುಖ ವಿಷಯವಾಗಲಿದೆ. ಈ ಟೂರ್ನಿಗಾಗಿ ಕ್ರಿಕೆಟ್ ಎಕ್ಸ್ಪರ್ಟ್ಸ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾದ ನೆರವನ್ನು ಪಡೆಯಲಿದ್ದೇವೆ ಎಂದು ಐಸಿಸಿ ಮೂಲಗಳಿಂದ ಕೇಳಿಬಂದಿದೆ.