ದುಬೈ: ವಿಶ್ವಕಪ್ ಟೂರ್ನಿಗೆ ಅದ್ದೂರಿ ತೆರೆ ಬೀಳುತ್ತಿದ್ದಂತೆ ಐಸಿಸಿ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಿದ್ದು, ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಭಾಜನರಾದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಜೀವನಶ್ರೇಷ್ಠ ಏರಿಕೆ ಕಂಡಿದ್ದಾರೆ.
ಸೋಮವಾರ ಬಿಡುಗಡೆಯಾಗಿರುವ ಐಸಿಸಿಯ ನೂತನ ರ್ಯಾಂಕಿಂಗ್ನಲ್ಲಿ ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಹಾಗೂ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ವಿಭಾಗದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದು, ಇಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಐಸಿಸಿ ವಿಶ್ವಕಪ್ ಕ್ರಿಕೆಟ್ ತಂಡ ಪ್ರಕಟ, ವಿಲಿಯಮ್ಸನ್ ಕ್ಯಾಪ್ಟನ್: ರೋಹಿತ್,ಬುಮ್ರಾಗೂ ಸ್ಥಾನ
ವಿಶ್ವಕಪ್ನಲ್ಲಿ ಐದು ಶತಕಗಳ ಮೂಲಕ ರನ್ಮಳೆಗರೆದಿದ್ದ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ 881 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ವಿಶೇಷವೆಂದರೆ ಕೊಹ್ಲಿ ಮತ್ತು ರೋಹಿತ್ ನಡುವಿನ ಅಂತರ ಕೇವಲ ಐದು ಅಂಕ ಮಾತ್ರ..!
799 ಅಂಕಗಳೊಂದಿಗೆ ಕೇನ್ ವಿಲಿಯಮ್ಸನ್ ಆರನೇ ಸ್ಥಾನದಲ್ಲಿದ್ದರೆ ಕಿವೀಸ್ನ ಮತ್ತೊಬ್ಬ ಆಟಗಾರ ರಾಸ್ ಟೇಲರ್ 841 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ವಿಶ್ವಕಪ್ ವಿಜೇತ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ 694 ಅಂಕಗಳೊಂದಿಗೆ 20 ಸ್ಥಾನಕ್ಕೆ ಏರಿಕೆಯಾಗಿದ್ದರೆ, ಇದೇ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಅಗ್ರ 10 ಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಟೀಮ್ ಇಂಡಿಯಾ ಪರವಾಗಿ ಕೊನೆಯ ಹಂತದಲ್ಲಿ ಬ್ಯಾಟ್, ಬಾಲ್ ಹಾಗೂ ಕ್ಷೇತ್ರರಕ್ಷಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಆಲ್ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ವಿಭಾಗದಲ್ಲಿ 24 ಸ್ಥಾನಗಳ ಏರಿಕೆ ಕಂಡು 108ರಲ್ಲಿ ಕಾಣಿಸಿಕೊಂಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನದಲ್ಲಿದ್ದರೆ, ಕಿವೀಸ್ನ ಟ್ರೆಂಟ್ ಬೌಲ್ಟ್ ಎರಡು ಮತ್ತು ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ಮೂರನೇ ಸ್ಥಾನ ಪಡೆದಿದ್ದಾರೆ. ವಿಶ್ವಕಪ್ನಲ್ಲಿ 20 ವಿಕೆಟ್ ಸಂಪಾದಿಸಿದ ಜೋಫ್ರಾ ಅರ್ಚರ್ ಭಾರಿ ಮೇಲಕ್ಕೇರಿದ್ದು ಅಗ್ರ 30ಕ್ಕೆ ಎಂಟ್ರಿ ನೀಡಿದ್ದಾರೆ.
ಆಲ್ರೌಂಡರ್ ವಿಭಾಗದಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದು, ಬೆನ್ ಸ್ಟೋಕ್ಸ್ ಹಾಗೂ ಮೊಹಮ್ಮದ್ ನಬಿ ನಂತರದ ಸ್ಥಾನ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಅಗ್ರ ಹತ್ತರಲ್ಲಿರುವ ಭಾರತದ ಏಕೈಕ ಆಲ್ರೌಂಡರ್. ಇದೇ ವಿಭಾಗದಲ್ಲಿ ರವೀಂದ್ರ ಜಡೇಜಾ 17 ಸ್ಥಾನದಲ್ಲಿದ್ದಾರೆ.
'ವಿಶ್ವ' ವಿಜೇತ ಇಂಗ್ಲೆಂಡ್ ಪಾರಮ್ಯ..!
ರೋಚಕ ಹಣಾಹಣಿಯಲ್ಲಿ ವಿಶ್ವಕಪ್ ಗೆದ್ದಿರುವ ಇಂಗ್ಲೆಂಡ್ ತಂಡಗಳ ಶ್ರೇಯಾಂಕದಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಸೆಮೀಸ್ನಲ್ಲಿ ಸೋತ ಟೀಮ್ ಇಂಡಿಯಾ ನಂತರದ ಸ್ಥಾನದಲ್ಲಿದೆ. ರನ್ನರ್ ಅಪ್ ನ್ಯೂಜಿಲ್ಯಾಂಡ್ ಮೂರು ಹಾಗೂ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನ ಪಡೆದಿದೆ.