ನವದೆಹಲಿ: ಕೇವಲ 16 ವರ್ಷದವರಾಗಿದ್ದಾಗಲೇ ಭಾರತ ತಂಡ ಸೇರಿದ್ದ ಸಚಿನ್ ತೆಂಡೂಲ್ಕರ್ ಅವರ ಆರಂಭದ ದಿನಗಳನ್ನು ನೋಡುವುದಾದರೆ ಅವರು ಕ್ರಿಕೆಟ್ ಜಗತ್ತಿನಲ್ಲಿ ಇಷ್ಟೊಂದು ದೊಡ್ಡ ಹೆಸರು ಮಾಡಬಲ್ಲರೆಂದು ನಾನು ಭಾವಿಸಿರಲಿಲ್ಲ ಎಂದು ಪಾಕಿಸ್ತಾನದ ಬೌಲಿಂಗ್ ಲೆಜೆಂಡ್ ವಾಕರ್ ಯೂನಿಸ್ ಹೇಳಿದ್ದಾರೆ.
ವಿಶ್ವ ಕ್ರಿಕೆಟ್ನಲ್ಲಿ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್, ಹೆಚ್ಚು ಶತಕಗಳ ಸಹಿತ ಹಲವಾರು ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿರುವ ಸಚಿನ್, ಕೇವಲ 16ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರ ಕಠಿಣ ಪರಿಶ್ರಮ, ಆತ್ಮಬಲ ಅವರನ್ನು ವಿಶ್ವಶ್ರೇಷ್ಠ ಕ್ರಿಕೆಟಿಗನನ್ನಾಗಿ ಮಾಡಿದೆ. ಆದರೆ ಪಾಕ್ ಲೆಜೆಂಡ್
ವಾಕರ್ ಯೂನಿಸ್ ಸಚಿನ್ರ ಆರಂಭದ ದಿನಗಳನ್ನು ನೆನೆದರೆ ಅವರು ಇಷ್ಟರ ಮಟ್ಟಿಗೆ ಹೆಸರು ಮಾಡುತ್ತಾರೆ, ಇಂತಹ ದೊಡ್ಡ ಕ್ರಿಕೆಟಿಗನಾಗುತ್ತಾರೆ ಎಂದು ಆಲೋಚನೆ ಮಾಡಿರಲಿಲ್ಲ ಎಂದಿದ್ದಾರೆ.
1989ರಲ್ಲಿ ಸಚಿನ್ ಪಾಕಿಸ್ತಾನದ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಶಾಲಾ ದಿನಗಳಲ್ಲಿ ತ್ರಿಶತಕ ಸಿಡಿಸಿದ್ದ ಬಾಲಕನನ್ನ ನೋಡಿದ್ದ ತಮಗೆ ಅಷ್ಟೊಂದು ಆಕರ್ಷಣೀಯ ಎಂದು ಕಂಡಿರಲಿಲ್ಲ ಎಂದು ವಾಕರ್ ಹೇಳಿದ್ದಾರೆ.
ಸಚಿನ್ ಬಗ್ಗೆ ಹೇಳುವುದಾದರೆ, ಇಡೀ ಭಾರತದ ಅಂಡರ್-19 ತಂಡ ಆ ಹುಡುಗನ ಬಗ್ಗೆ ಮಾತನಾಡುತ್ತಿತ್ತು. ಶಾಲಾ ಬಾಲಕ ತ್ರಿಶತಕ ಸಿಡಿಸಿದ್ದ. ಶಾಲಾ ಕ್ರಿಕೆಟ್ನಲ್ಲಿ ಯಾರು ತ್ರಿಶತಕ ಸಿಡಿಸುತ್ತಾರೆ?, ಶತಕ ದಾಖಲಿಸಿದರೆ ಅದೊಂದು ಅದ್ಭುತವಾದ ವಿಷಯ ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು ಎಂದು ವಾಕರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
'ನಮಗೂ ಕೂಡ ಆ ಯುವ ಆಟಗಾರನ ಬಗ್ಗೆ ತಿಳಿದಿತ್ತು. ಆದರೆ ನನಗೆ ಆತನನ್ನು ಮೊದಲು ನೋಡಿದಾಗ, ಆತ ನನಗೆ ಅಷ್ಟೇನೂ ಪ್ರಭಾವಿ ಎನಿಸಲಿಲ್ಲ. ಮುಂದೆ ಆತ ಕ್ರಿಕೆಟ್ ಜಗತ್ತಿನ ಅದ್ಭುತ ಸಚಿನ್ ತೆಂಡೂಲ್ಕರ್ ಆಗುತ್ತಾರೆ ಎಂದು ನಾನು ಭಾವಿಸಿರಲಿಲ್ಲ. ಇಂದು ಅವರು ಏನಾಗಿದ್ದಾರೆ, ಇಷ್ಟು ವರ್ಷ ಏನನ್ನ ಸಾಧಿಸಿದ್ದಾರೆ, ಅದು ಮೈದಾನದ ಹೊರಗಾಗಿರಬಹುದು ಅಥವಾ ಒಳಗಾಗಿರಬಹುದು. ಒಂದು ನಿರ್ದಿಷ್ಟ ಸಮಯದಲ್ಲಿ ಅವರು ಕ್ರಿಕೆಟ್ನಲ್ಲಿ ಬಹುದೊಡ್ಡ ಹೆಸರುಗಳಿಸುತ್ತಾರೆಂದು ನನಗೆ ಅರಿವಿರಲಿಲ್ಲ. ಆದರೆ ಅವರ ಕಠಿಣ ಪರಿಶ್ರಮ ಎಲ್ಲವನ್ನು ತಂದುಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
47 ವರ್ಷದ ಸಚಿನ್ ತೆಂಡೂಲ್ಕರ್ ಒಟ್ಟಾರೆ 34567 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 18426 ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 15921 ರನ್ ಗಳಿಸಿದ್ದಾರೆ. ಒಟ್ಟಾರೆ 100 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ.