ಮುಂಬೈ: ಧೋನಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಂತಹ ಸಂದರ್ಭದಲ್ಲಿ ತಂಡಕ್ಕೆ ಆಯ್ಕೆಯಾದಂತಹ ಪ್ರತಿಭಾವಂತ ಯುವ ಕ್ರಿಕೆಟಿಗರನ್ನು ಬೆಳೆಸಿದ ಹಾಗೆ ಪ್ರಸ್ತುತ ವಿರಾಟ್-ರೋಹಿತ್ ಅವರಿಂದಲೂ ಇಂತಹುದ್ದೇ ಬೆಂಬಲವನ್ನು ಯುವ ಆಟಗಾರರಿಗೆ ಕೊಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಗೌತಮ್ ಗಂಭೀರ್ ತಿಳಿಸಿದ್ದಾರೆ.
ರೋಹಿತ್ ಆವರನ್ನೇ ಉದಾಹರಣೆಯಾಗಿ ತೆಗೆದುಕೊಂಡಿರುವ ಗಂಭೀರ್, ಧೋನಿ ನಾಯಕರಾಗಿದ್ದ ವೇಳೆ ರೋಹಿತ್ ಶರ್ಮಾ ಮಧ್ಯ್ಯಮ ಕ್ರಮಾಂಕದಲ್ಲಿ ರನ್ ಬರ ಎದುರಿಸುತ್ತಿದ್ದರು. ಆದರೆ ಅವರ ಪ್ರತಿಭೆಯನ್ನು ಗುರುತಿಸಿದ ಧೋನಿ ಅವರಿಗೆ ಅರಂಭಿಕರಾಗಿ ಬಡ್ತಿ ನೀಡಿದರು. ಅಲ್ಲಿಂದ ಅವರ ಆಟವೇ ಬದಲಾಯಿತು. ಧೋನಿಯ ಆ ಒಂದು ನಿರ್ಧಾರದಿಂದ ಇಂದು ರೋಹಿತ್ ಶರ್ಮಾ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಆಗಿದ್ದಾರೆ ಎಂದು ಗಂಭೀರ್ ತಿಳಿಸಿದ್ದಾರೆ.
" ಪ್ರಸ್ತುತ ಯುವ ಕ್ರಿಕೆಟಿಗರಾದ ಶುಬ್ಮನ್ ಗಿಲ್, ಸಂಜು ಸಾಮ್ಸನ್ ಅಂತಹ ಯುವ ಕ್ರಿಕೆಟಿಗರಿಗೆ ಅಂತಹ ಬೆಂಬಲ ಸಿಗಬೇಕಿದೆ ಎಂದು ಮಂಚೂಣಿ ಸುದ್ದಿ ಮಾಧ್ಯಮಕ್ಕೆ ಗಂಭೀರ್ ತಿಳಿಸಿದ್ದಾರೆ.
ಇದೀಗ ರೋಹಿತ್ ಸೀನಿಯರ್ ಆಟಗಾರನಾಗಿದ್ದಾರೆ. ಅವರಿಂದ ಯುವ ಆಟಗಾರರ ಬೆನ್ನಿಗೆ ಅವರು ನಿಲ್ಲುತ್ತಾರೆ ಎಂಬ ವಿಶ್ವಾಸದಲ್ಲಿದ್ದೇನೆ. ಯುವ ಆಟಗಾರರಿಗೆ ಬೆಂಬಲ ನೀಡಿದರೆ ಅವರು ಅದ್ಭುತ ಪ್ರತಿಭೆಯಾಗಿ ಹೊರ ಹೊಮ್ಮುತ್ತಾರೆ ಎನ್ನುವುದಕ್ಕೆ ರೋಹಿತ್ ನಮ್ಮ ಮುಂದಿರುವ ಅದ್ಭುತ ಉದಾಹರಣೆ ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಧೋನಿಯ ಬಗ್ಗೆ ಒಂದು ವಿಷಯ ಹೇಳಬೇಕೆಂದರೆ, ಅವರು ಸದಾ ರೋಹಿತ್ ಬಗ್ಗೆ ಮಾತನಾಡುತ್ತಿದ್ದರು. ಅವರೂ ತಂಡದ ಭಾಗವಾಗದಿದ್ದರೂ ಕೂಡ ಧೋನಿ ಅವರನ್ನು ಸೈಡ್ಲೈನ್ ಮಾಡಿರಲಿಲ್ಲ ಎಂದು ಡೆಲ್ಲಿ ಡ್ಯಾಶರ್ ತಿಳಿಸಿದ್ದಾರೆ.
ವಿರಾಟ್-ರೋಹಿತ್ ಕೂಡ ತಂಡಕ್ಕೆ ಬರುವ ಯುವ ಆಟಗಾರರ ಬೆಳವಣಿಗೆಗೆ ಧೋನಿ ನೀಡಿದ ಬೆಂಬಲವನ್ನು ನೀಡುತ್ತಾರೆಂದು ನಿರೀಕ್ಷಿಸಿದ್ದೇನೆ ಎಂದು ಗಂಭೀರ್ ತಿಳಿಸಿದ್ದಾರೆ.