ಕೋಲ್ಕತಾ : ಭಾರತದ ಸೀಮಿತ ಓವರ್‌ಗಳ ವೈಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಈ ವರ್ಷದ ಕೊನೆಯ ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮೈಕ್ ಹಸ್ಸಿ ಅಭಿಪ್ರಾಯಪಟ್ಟಿದ್ದಾರೆ.
ಸರಣಿಯ ಸಮಯದಲ್ಲಿ ಎಲ್ಲರ ಕಣ್ಣು ರೋಹಿತ್ ಮೇಲೆ ಇರುತ್ತವೆ. ಅವರು ಕಳೆದ ಅಕ್ಟೋಬರ್ನಲ್ಲಿ ಟೆಸ್ಟ್ ಓಪನರ್ ಆಗಿ ತಮ್ಮ ಚೊಚ್ಚಲ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಶತಕ ಸೇರಿದಂತೆ ಮೂರು ಶತಕಗಳನ್ನು ಗಳಿಸಿದ್ದರು. ಬಳಿಕ ಗಾಯದಿಂದಾಗಿ ಅವರು ನ್ಯೂಜಿಲೆಂಡ್‌ನಲ್ಲಿ ಎರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು ಎಂದು ಹಸ್ಸಿ ಹೇಳಿದ್ದಾರೆ.
ರೋಹಿತ್ ಸಾಕಷ್ಟು ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಈಗ ಅವನು ರೆಡ್ ಬಾಲ್ ಆಟದೊಂದಿಗೆ ಸ್ವಲ್ಪ ಯಶಸ್ಸನ್ನು ಗಳಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅದನ್ನು ನಿಭಾಯಿಸಲು ಅವರಿಗೆ ಸಾಮರ್ಥ್ಯ, ಕೌಶಲ್ಯ ಮತ್ತು ಮನೋಧರ್ಮವಿದೆ ಎಂಬುವುದರ ಬಗ್ಗೆ ಯಾವುದೇ ಸಂದೇಹವಿಲ್ಲ ಎಂದು ಹಸ್ಸಿ ತಿಳಿಸಿದ್ದಾರೆ.
ರೋಹಿತ್‌ಗೆ ಪ್ರಮುಖವಾದ ಸವಾಲೆಂದರೆ ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು. ಅವರು ಹೊಂದಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಆಸ್ಟ್ರೇಲಿಯಾದ ಪರಿಸ್ಥಿತಿಯೂ ವೇಗ ಮತ್ತು ಬೌನ್ಸ್ನೊಂದಿಗೆ ಉತ್ತಮ ಗುಣಮಟ್ಟದ ಬೌಲಿಂಗ್ ದಾಳಿಯನ್ನು ಎದುರಿಸಲು ಸವಾಲಾಗಿರುತ್ತದೆ ಎಂದಿದ್ದಾರೆ.
ಡಿಸೆಂಬರ್ 3 ರಿಂದ ಬ್ರಿಸ್ಬೇನ್‌ನ ಗಬ್ಬಾದಲ್ಲಿ ಆರಂಭವಾಗಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ.