ಮೈಸೂರು: ಕರ್ನಾಟಕ ತಂಡ ರಣಜಿ ಟ್ರೋಫಿಯ ತನ್ನ 3ನೇ ಪಂದ್ಯದಲ್ಲಿ ಹಿಮಾಚಲ ಪ್ರದೇಶದ ವಿರುದ್ಧ 69 ರನ್ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ್ದ ಕರ್ನಾಟಕ ತಂಡ ಮೊದಲ ದಿನವೇ ಕನ್ವರ್ ಅಭಿನಯ್ ಸಿಂಗ್ ದಾಳಿಗೆ ಸಿಲುಕಿ ಕೇವಲ 166 ರನ್ಗಳಿಗೆ ಆಲೌಟ್ ಆಗಿತ್ತು. ನಾಯಕ ಕರುಣ್ ನಾಯರ್ ಏಕಾಂಗಿ ಹೋರಾಟ ನಡೆಸಿ 81 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದ್ದರು.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಹಿಮಾಚಲ ಪ್ರದೇಶದ ಬೌಲರ್ಗಳಾದ ಕನ್ವರ್ ಅಭಿನಯ್ ಸಿಂಗ್ 5 ವಿಕೆಟ್, ರಿಷಿ ಧವನ್ 3 ಹಾಗೂ ವೈಭವ್ ಅರೋರ 2 ವಿಕೆಟ್ ಪಡೆದು ಕರ್ನಾಟಕ ಬ್ಯಾಟ್ಸ್ಮನ್ಗಳು 200ರ ಗಡಿ ದಾಟದಂತೆ ನೋಡಿಕೊಂಡರು.
ಇನ್ನು ಮೊದಲ ದಿನವೇ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಹಿಮಾಚಲ ಪ್ರದೇಶ 26ಕ್ಕೆ 3 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು. ಪ್ರಿಯಾಂಶು ಖಂಡುರಿ 14 ಹಾಗೂ ಮಯಾಂಕ್ ಡ್ಯಾಗರ್ 1 ರನ್ ಗಳಿಸಿ ಔಟಾಗದೆ ಉಳಿದಿದ್ದರು.
ಎರಡನೇ ದಿನವಾದ ಇಂದು ಆರಂಭದಲ್ಲಿ 4 ರನ್ ಗಳಿಸಿದ್ದ ಮಯಾಂಕ್ ಡ್ಯಾಗರ್ರನ್ನು ಮಿಥುನ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಆದರೆ 6 ವಿಕೆಟ್ಗೆ ಖಂಡುರಿ(69) ಹಾಗೂ ನಿಖಿಲ್ ಗಂಗ್ಟ(46) 92 ರನ್ ಸೇರಿಸಿ ಚೇತರಿಕೆ ನೀಡಿದರು. ಗಂಗ್ಟ ಔಟಾದ ನಂತರ ರಿಷಿಧವನ್ ಜೊತೆ ಸೇರಿದ ಖಂಡುರಿ ಬರೋಬ್ಬರಿ 240 ಎಸೆತಗಳನ್ನೆದುರಿಸಿ 8 ಬೌಂಡರಿ ಸಹಿತ 69 ರನ್ ಗಳಿಸಿ ಹಿಮಾಚಲ ಪ್ರದೇಶಕ್ಕೆ ಮುನ್ನಡೆ ಒದಗಿಸಿ ವಿ.ಕೌಶಿಕ್ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ 6 ರನ್ ಗಳಿಸಿ ಕೀಪರ್ ಅಂಕುಶ್ ಬೈನ್ ಕೂಡ ಕೌಶಿಕ್ಗೆ ವಿಕೆಟ್ ಒಪ್ಪಿಸಿದರು.
ಆದರೆ ಹಿರಿಯ ಆಲ್ರೌಂಡರ್ ರಿಷಿ ಧವನ್ ಔಟಾಗದೆ 72 ರನ್ ಗಳಿಸಿ ಕರ್ನಾಟಕ ಬೌಲರ್ಗಳನ್ನು ಕಾಡಿದ್ದಲ್ಲದೆ ಆಕಾಶ್ ವಸಿಷ್ಠ (18) ಜೊತೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶ 7 ವಿಕೆಟ್ ಕಳೆದುಕೊಂಡು 235 ರನ್ ಗಳಿಸಿದ್ದು, 69 ರನ್ಗಳ ಲೀಡ್ ಪಡೆದುಕೊಂಡಿದೆ.
ಕರ್ನಾಟಕ ಪರ ವಿ.ಕೌಶಿಕ್ 3 ವಿಕೆಟ್, ಪ್ರತೀಕ್ ಜೈನ್ 2, ಸುಚಿತ್ ಹಾಗೂ ಮಿಥನ್ ತಲಾ ಒಂದು ವಿಕೆಟ್ ಪಡೆದರು.