ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯಕ್ಕೆ ಮುನ್ನ ತಯಾರಾಗುವ ಹಾಗೂ ಕೆಲಸದ ನೀತಿಗಳು ಅದ್ಭುತ. ಅವರಿಂದ ಬಹಳಷ್ಟು ಕಲಿಯುತ್ತಿದ್ದೇನೆ ಎಂದು ಆಲ್ರೌಂಡರ್ ಹನುಮ ವಿಹಾರಿ ತಿಳಿಸಿದ್ದಾರೆ.
"ಪಂದ್ಯಕ್ಕೂ ಮುನ್ನ ತಯಾರಾಗುವುದು ಕೊಹ್ಲಿಯ ಉತ್ತಮ ಗುಣ, ನಾನು ಅವರಿಂದ ಅದನ್ನು ಕಲಿತಿದ್ದೇನೆ. ಅವರ ಕೆಲಸದ ನೀತಿಗಳು ಕೂಡ ಅದ್ಭುತವಾಗಿವೆ" ಎಂದು 26 ವರ್ಷದ ವಿಹಾರಿ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಹೊಗಳಿದ್ದಾರೆ.
ವಿಹಾರಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ನಲ್ಲಿ 55 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆಗಿದ್ದರು. ಅವರು ವಿದೇಶದಲ್ಲಿ ಆಡುವ ಎಲ್ಲಾ ಪಂದ್ಯಗಳಲ್ಲೂ ತಂಡದ ಭಾಗವಾಗಿದ್ದಾರೆ. ಆದರೆ ತವರಿನಲ್ಲಿ ನಡೆಯುವ ಪಂದ್ಯಗಳಲ್ಲಿ ಮಾತ್ರ ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಏಕೆಂದರೆ ಭಾರತ ತಂಡ ತವರಿನಲ್ಲಿ ಒಬ್ಬ ಹೆಚ್ಚುವರಿ ಬೌಲರ್ನೊಂದಿಗೆ ಕಣಕ್ಕಿಳಿಯಲಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಹಾರಿ "ನಾನು ತಂಡಕ್ಕಾಗಿ ಏನು ಬೇಕಾದರು ಮಾಡಲು ಸಿದ್ಧ. ನಾನು ಸದಾ ರನ್ ಗಳಿಸಲು ಪ್ರಯತ್ನಿಸುತ್ತೇನೆ. ವಿದೇಶದಲ್ಲಿ ಆಡುವಾಗ ದೀರ್ಘಾವಧಿ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸುತ್ತೇನೆ. ಹೀಗಾಗಿ ತಂಡ ನನ್ನನ್ನು ಡ್ರಾಪ್ ಮಾಡುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು ತಾವು ಎಲ್ಲಾ ಫಾರ್ಮೆಟ್ಗಳಲ್ಲಿ ಆಡುವ ಸಾಮರ್ಥ್ಯವನ್ನು ಹೊಂದಿರುವುದಾಗಿ ತಿಳಿಸಿರುವ ಅವರು, ಒಮ್ಮೆ ಅವಕಾಶ ಸಿಕ್ಕರೆ ಸಾಭೀತುಪಡಿಸುವ ಹಂಬಲ ವ್ಯಕ್ತಪಡಿಸಿದ್ದಾರೆ.