ನವದೆಹಲಿ: ಪ್ರಸ್ತುತ ಅಮಾನತುಗೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಈ ವರ್ಷದ ಟಿ-20 ವಿಶ್ವಕಪ್ ಜಾಗವನ್ನು ತೆಗೆದುಕೊಳ್ಳಬಹುದು ಎಂದು ಬಿಸಿಸಿಐನ ಸುಪ್ರೀಂ ಕೌನ್ಸಿಲ್ ಸದಸ್ಯ ಅನ್ಶುಮಾನ್ ಗಾಯಕ್ವಾಡ್ ಅಭಿಪ್ರಾಯಪಟ್ಟರು.
ಈ ವರ್ಷ ಟಿ-20 ವಿಶ್ವಕಪ್ ನಡೆಯಲಿದೆಯಾ ಎಂಬ ಅನುಮಾನ ನನ್ನಲ್ಲಿದೆ. ಐಪಿಎಲ್ ಬಗ್ಗೆ, ನಾವು ಈಗ ಯೋಚಿಸಲು ಸಾಧ್ಯವಿಲ್ಲ. ಇದು ಭಾರತದ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಅಕ್ಟೋಬರ್-ನವೆಂಬರ್ನಲ್ಲಿ ನಡೆಯುವ ಈ ಟಿ-20 ವಿಶ್ವಕಪ್ ಸಮಯದಲ್ಲಿ ಮಾತ್ರ ಅವಕಾಶ ಇರುತ್ತದೆ ಎಂದು ಗಾಯಕ್ವಾಡ್ ತಿಳಿಸಿದರು.
ವಿಶ್ವಕಪ್ ರದ್ದುಗೊಂಡರೆ ಅಥವಾ ಮುಂದೂಡಲ್ಪಟ್ಟರೆ, ಐಪಿಎಲ್ ಮಾತ್ರ ನಡೆಯಬಹುದು. ಆದರೆ, ಭಾರತದಲ್ಲಿನ ಆಗಿನ ಪರಿಸ್ಥಿತಿಗಳ ಮೇಲೆ ಅದು ಅವಲಂಬಿಸಿರುತ್ತದೆ ಎಂದು ಅವರು ಹೇಳಿದರು.
ಕನಿಷ್ಠ ನಾಲ್ಕು ತಿಂಗಳ ನಂತರ ಕ್ರಿಕೆಟ್ ಪುನಾರಂಭವಾಗಬಹುದು. ಕ್ರಿಕೆಟ್ ಪುನಾರಂಭಿಸಲು ಇನ್ನೂ ಎರಡು ತಿಂಗಳು ಅಥವಾ ನಾಲ್ಕು ತಿಂಗಳು ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.