ನವದೆಹಲಿ: ಸರಿಯಾದ ಸಮಯದಲ್ಲಿ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದಲ್ಲೇ ಆಯೋಜನೆಯಾಗಬೇಕು ಎಂದು ಬಯಸುತ್ತೇನೆ ಎಂದು ಟೀಮ್ ಇಂಡಿಯಾ ಟಿ-20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ತಿಳಿಸಿದ್ದಾರೆ.
ಪುರುಷರ ಐಪಿಎಲ್ ಆರಂಭವಾಗಿ ಈಗಾಗಲೆ 12 ವರ್ಷ ಕಳೆದಿದ್ದು, 13ನೇ ಆವೃತ್ತಿಗೂ ದಿನಗಣನೆ ಆರಂಭವಾಗಿದೆ. ಇದೀಗ ಮಹಿಳಾ ಕ್ರಿಕೆಟ್ ಕೂಡ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗ ಸೃಷ್ಟಿಸುತ್ತಿದ್ದು, ಮಹಿಳಾ ಐಪಿಎಲ್ ಆಯೋಜನೆ ಸರಿಯಾದ ದಿಕ್ಕಿನಲ್ಲಿ ಮಹಿಳಾ ಕ್ರಿಕೆಟ್ ಸಾಗುತ್ತಿದೆ ಎಂದು ಕೌರ್ ಅಭಿಪ್ರಾಯ ಪಟ್ಟಿದ್ದಾರೆ.
ನಾವು ಮಹಿಳಾ ಐಪಿಎಲ್ ಹೊಂದಲು ಖಂಡಿತವಾಗಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಸರಿಯಾದ ಸಮಯ ಕೂಡಿ ಬಂದಾಗ ಮೊದಲ ಆವೃತ್ತಿಯ ಐಪಿಎಲ್ ಭಾರತಲ್ಲೇ ಆಯೋಜನೇಯಾಗಬೇಕೆಂದು ನಾನು ಬಯಸುತ್ತೇನೆ ಎಂದು ಕೌರ್ ಮಂಚೂಣಿ ವೆಬ್ಸೈಟ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
2020ರ ಐಪಿಎಲ್ ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಆಯೋಜನೆಯಾಗಲಿದೆ. ಎಂದಿನಂತೆ ಪುರುಷರ ಪ್ಲೇಆಫ್ ವೇಳೆ ಮಹಿಳೆಯರ ಟಿ-20 ಚಾಲೆಂಜ್ ಅನ್ನು ಕೂಡ ಬಿಸಿಸಿಐ ಆಯೋಜಿಸಲು ತೀರ್ಮಾನಿಸಿದೆ. ನವೆಂಬರ್ 1ರಿಂದ ನವೆಂಬರ್ 10ರೊಳಗೆ ಮಹಿಳಾ ಟಿ-20 ಚಾಲೆಂಜ್ ನಡೆಯಲಿದೆ.
ಪ್ರಸ್ತುತ ಬಿಸಿಸಿಐ ಮಹಿಳಾ ಐಪಿಎಲ್ ಬದಲಿಗೆ ಮಹಿಳಾ ಟಿ-20 ಚಾಲೆಂಜ್ ಎಂಬ ಲೀಗ್ ನಡೆಸುತ್ತಿದೆ. ಮೊದಲ ಆವೃತ್ತಿಯಲ್ಲಿ ಎರಡು ತಂಡಗಳು, ಎರಡನೇ ಆವೃತ್ತಿಯಲ್ಲಿ 3 ತಂಡಗಳು ಸ್ಪರ್ಧಿಸಿದ್ದವು. ಇದೀಗ ಮೂರನೇ ಆವೃತ್ತಿಯಲ್ಲಿ 3 ತಂಡಗಳು ಫೈನಲ್ ಸೇರಿದಂತೆ 4 ಪಂದ್ಯಗಳನ್ನಾಡಲಿವೆ.