ಮುಂಬೈ: ಕ್ರೀಡಾ ಜಗತ್ತಿನಲ್ಲಿ ಫುಟ್ಬಾಲ್ ಹೊರತು ಪಡಿಸಿದರೆ ಹೆಚ್ಚು ಪ್ರಸಿದ್ಧವಾಗಿರುವ ಆಟವೆಂದರೆ ಕ್ರಿಕೆಟ್. ಈಗಾಗಲೇ ಪುರುಷರ ವಿಭಾಗದಲ್ಲಿ ಕ್ರಿಕೆಟ್ ವಿಶ್ವದ ಎಲ್ಲಾ ರಾಷ್ಟ್ರಗಳಗೂ ಕಾಲಿಟ್ಟಿದ್ದು, ಕ್ರಿಕೆಟ್ನಂತಹ ದಿನಪೂರ್ತಿ ಆಡುವ ಆಟದ ಜಂಜಾಟವೇ ಬೇಡವೆಂದು ದೂರವಿದ್ದ ಚೀನಾ, ಅಮೆರಿಕ, ಜಪಾನ್ನಂತಹ ರಾಷ್ಟ್ರಗಳೇ ಇಂದು ಕ್ರಿಕೆಟ್ಗೆ ಮಾರುಹೋಗಿ ತಮ್ಮ ದೇಶದಲ್ಲಿ ಯುವ ಪೀಳಿಗೆಯನ್ನು ಕ್ರಿಕೆಟ್ನತ್ತ ಸೆಳೆಯಲು ಮುಂದಾಗಿವೆ.
ಪುರುಷರ ವಿಭಾಗ ಕ್ರಿಕೆಟ್ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವಾಗಲೇ ಐಸಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. 2017ರಲ್ಲಿ ಮಹಿಳಾ ವಿಶ್ವಕಪ್ನಲ್ಲಿ ಪುರುಷರ ಕ್ರಿಕೆಟ್ನಂತೆಯೇ ಹಣ ಹೂಡಲು ನಿರ್ಧರಿಸಿತ್ತು. ಮಹಿಳೆಯರನ್ನು ಕ್ರೀಡೆಯಲ್ಲಿ ಬೆಳೆಸುವ ಹಾಗೂ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿತ್ತು. ಆದರೆ ಅಚ್ಚರಿಯಂದರೆ ಭಾರತದಲ್ಲಿ ಜನರು ಮಹಿಳಾ ಕ್ರಿಕೆಟ್ ಆಟವನ್ನು ನಿರೀಕ್ಷಿಗೂ ಮೀರಿ ಸ್ವೀಕರಿಸಿದರೆಂಬುದು ವಿಶೇಷ ಸಂಗತಿ.

ಎರಡು ದಶಕಗಳಿಂದ ಭಾರತದಲ್ಲಿ ಮಹಿಳಾ ಕ್ರಿಕೆಟ್ ಚಾಲ್ತಿಯಲ್ಲಿದ್ದರೂ ಸಹ ಯಾರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ ಎಂಬ ವಿಚಾರವೇ ತಿಳಿಯುತ್ತಿರಲಿಲ್ಲ. ಆದ್ರೆ 2017ರ ವಿಶ್ವಕಪ್ ಸೆಮಿಫೈನಲ್ನಲ್ಲಿ ನಂಬರ್ ಒನ್ ಹಾಗೂ ಚಾಂಪಿಯನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್ ನಡೆಸಿದ್ದ ಪಂಜಾಬ್ನ ಹುಡುಗಿ ಹರ್ಮನ್ ಪ್ರೀತ್ ಕೌರ್ ನಿಜಕ್ಕೂ ಭಾರತದ ಮನೆಮಾತಾದರಲ್ಲದೆ, ಮಹಿಳೆಯರ ಕ್ರಿಕೆಟ್ನತ್ತಲೂ ಲಕ್ಷಾಂತರ ಜನರನ್ನ ಸೆಳೆದರು.
ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ ವಿಶ್ವಕಪ್ಗೆ ಕ್ವಾಲಿಫೈಯರ್ ಮೂಲಕ ಪ್ರವೇಶ ಪಡೆದಿದ್ದರಿಂದ ಸೆಮಿಫೈನಲ್ ಪ್ರವೇಶಿಸಿದ್ದೇ ಭಾರತ ತಂಡದ ಅತ್ಯುತ್ತಮ ಪ್ರದರ್ಶನ ಎಂದೇ ಬಿಂಬಿಸಲಾಗಿತ್ತು. ಏಕೆಂದರೆ ಸೆಮಿಫೈನಲ್ನಲ್ಲಿ ಭಾರತಕ್ಕೆ ಎದುರಾಗಿದ್ದು ಹಾಲಿ ಚಾಂಪಿಯನ್ ಹಾಗೂ ಏಕದಿನ ಕ್ರಿಕೆಟ್ನ ನಂಬರ್ ಒನ್ ತಂಡ ಆಸ್ಟ್ರೇಲಿಯಾ!

ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಆಸ್ಟ್ರೇಲಿಯಾ ಲೀಗ್ನಲ್ಲಿ ಮಣಿಸಿತ್ತು. ಇದು ಟೂರ್ನಿಯಲ್ಲಿ ಎರಡನೇ ಬಾರಿ ಮುಖಾಮುಖಿಯಾಗಿದ್ದರಿಂದ ನಂಬರ್ ಒನ್ ತಂಡವನ್ನು ಸೋಲಿಸುವುದು ಆಸಾಧ್ಯ ಎಂದು ನಂಬಲಾಗಿತ್ತು. ಆದರೆ ಹರ್ಮನ್ ಪ್ರೀತ್ ಕೌರ್ ಎಂಬ ಯುವ ಆಟಗಾರ್ತಿಯ ಆಟ ವಿಶ್ವ ಕ್ರಿಕೆಟ್ಅನ್ನೇ ಬೆಕ್ಕಸ ಬೆರಗಾಗುವಂತೆ ಮಾಡಿತ್ತು. ಅಲ್ಲದೆ ಆ ಪಂದ್ಯ ಭಾರತದ ಮಹಿಳಾ ಕ್ರಿಕೆಟ್ ಅನ್ನು ಇತಿಹಾಸ ಪುಟ ಸೇರುವಂತೆ ಮಾಡಿತ್ತು.
ಮಳೆಯ ಕಾರಣ 42 ಓವರ್ಗಳಿಗೆ ಸೀಮಿತಗೊಳಿಸಿದ್ದ ಆ ಪಂದ್ಯದಲ್ಲಿ ನಾಯಕಿ ಮಿಥಾಲಿ ರಾಜ್ 25 ನೇ ಓವರ್ನಲ್ಲಿ ತಂಡದ ಮೊತ್ತ 101ರನ್ ಗಳಿಸಿದ್ದ ವೇಳೆ ಔಟಾದರು. ಅಲ್ಲಿಯವರೆಗೆ ಮಿಥಾಲಿರಾಜ್ ನಂಬಿಕೊಂಡಿದ್ದ ತಂಡದಲ್ಲಿ ಸೋಲಿನ ಛಾಯೆ ಮೂಡಿತ್ತು. ಆದರೆ ಯುವ ಆಲ್ರೌಂಡರ್ ದೀಪ್ತಿ ಶರ್ಮಾರನ್ನು ಜೊತೆಗೂಡಿದ ಪಂಜಾಬ್ನ ಹರ್ಮನ್ ಪಂದ್ಯದ ಗತಿಯನ್ನೇ ಬದಲಾಯಿಸಿದ್ದರು. ಈಗಾಗಲೇ ಬಿಗ್ಬ್ಯಾಶ್ ಲೀಗ್ನಲ್ಲಿ ಆಸ್ಟ್ರೇಲಿಯಾ ತಂಡದ ಬೌಲಿಂಗ್ ಎದುರಿಸಿದ್ದ ಅವರು ಏಕಾಂಗಿಯಾಗಿ ಆಸೀಸ್ ಬೌಲರ್ಗಳ ಸವಾಲಿಗೆ ತಮ್ಮ ಅಗ್ರೆಸಿವ್ ಬ್ಯಾಟಿಂಗ್ ಮೂಲಕ ಉತ್ತರಿಸಿದ್ದರು.

ಆರಂಭದಲ್ಲಿ 60 ಎಸೆತಗಳಿಗೆ 40 ರನ್ ಗಳಿಸಿ ನಿಧಾನಗತಿ ಬ್ಯಾಟಿಂಗ್ ನಡೆಸಿದ್ದ ಕೌರ್ ನಂತರ ಸ್ಟಂಪ್ ಔಟ್ ಚಾನ್ಸ್ನಿಂದಲೂ ಬಚಾವ್ ಆಗಿದ್ದರು. ನಂತರ ಸಿಕ್ಕ ಅವಕಾಶವನ್ನು ಬಳಸಿಕೊಂಡ ಕೌರ್ ನಂತರ ಕೇವಲ 4 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು. ಈ ಹಂತದಲ್ಲಿ ದೀಪ್ತಿ ಶರ್ಮಾರ ಗೊಂದಲದಿಂದ ಮತ್ತೊಮ್ಮೆ ಔಟ್ ಆಗುವ ಸಂಭವ ಕೂಡ ನಿರ್ಮಾಣವಾಗಿತ್ತು. ಆದ್ರೆ ಸ್ವಲ್ಪದರಲ್ಲೇ ಬಚಾವ್ ಆದ ಅವರು ಮೈದಾನದಲ್ಲೇ ದೀಪ್ತಿ ಮೇಲೆ ಸಿಟ್ಟಾಗಿ ಬೈಯ್ದ ಘಟನೆಯೂ ನಡೆದಿತ್ತು.
ಆದರೂ ಆಟದ ಕಡೆ ಮತ್ತೆ ಗಮನ ಹರಿಸಿದ ಕೌರ್ 82 ಎಸೆತಗಳಲ್ಲಿ ಶತಕ ಪೂರ್ಣಗೊಳುಸಿದರು. ಅಲ್ಲಿಯವರೆಗೆ ಅವರ ಸ್ಟ್ರೈಕ್ ರೇಟ್ 111.11 ಇತ್ತು. ಕೌರ್ 100 ರಿಂದ 150 ತಲುಪಲು ತೆಗೆದುಕೊಂಡಿದ್ದು ಕೇವಲ 17 ಎಸೆತ. ಅಲ್ಲದೆ ನಂತರದ 8 ಎಸೆತಗಳಲ್ಲಿ 21 ರನ್ ಸಿಡಿಸಿದ್ದರು. ಒಟ್ಟಾರೆ 115 ಎಸೆತಗಳಲ್ಲಿ ಭರ್ಜರಿ 7 ಸಿಕ್ಸರ್ ಹಾಗೂ 20 ಬೌಂಡರಿ ಸಹಿತ 171 ರನ್ ಸಿಡಿಸಿದ್ದರು.
ಈ ಪಂದ್ಯವನ್ನು ಭಾರತ ತಂಡ 36 ರನ್ಗಳಿಂದ ಗೆದ್ದು ಫೈನಲ್ ಪ್ರವೇಶಿಸಿತು. ಹರ್ಮನ್ ಪ್ರೀತ್ ಕೌರ್ರ ಅದೊಂದು ಇನ್ನಿಂಗ್ಸ್ ಭಾರತದಲ್ಲಿ ಮಹಿಳಾ ಕ್ರಿಕೆಟ್ ಬಗ್ಗೆ ಕಿಚ್ಚೆಬ್ಬೆಸಿತು, ಫೈನಲ್ವರೆಗೆ ಇಡೀ ದೇಶವೇ ಭಾರತದ ಮಹಿಳೆಯರು ವಿಶ್ವಕಪ್ ಎತ್ತಿ ಹಿಡಿಯಲಿ ಎಂದು ಪ್ರಾರ್ಥಿಸಿದ್ದರು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ #WWC2017 ಎಂದು ಆ ವರ್ಷದಲ್ಲಿ ಅತಿ ಹೆಚ್ಚು ಬಳಕೆಯಾದ ಹ್ಯಾಶ್ಟ್ಯಾಗ್ ಆಯಿತೆಂದರೆ ಐಸಿಸಿ ಶ್ರಮ ಹಾಗೂ ಮಹತ್ವದ ಯೋಜನೆ ಫಲಕೊಟ್ಟಿತ್ತು.
ಆಸ್ಟ್ರೇಲಿಯಾದಂತಹ ಪ್ರಬಲ ಎದುರಾಳಿಯನ್ನು ಮಣ್ಣುಮುಕ್ಕಿಸಿದ ಭಾರತ ತಂಡ ಮಹಿಳಾ ಕ್ರಿಕೆಟ್ ದಿಕ್ಕನ್ನೇ ಬದಲಾಯಿಸಿತೆಂದರೆ ಅಚ್ಚರಿಯಿಲ್ಲ. ಅದಕ್ಕೆ ಕಾರಣ ಒಂದು ಇನ್ನಿಂಗ್ಸ್, ಅದು ಪಂಜಾಬ್ನ ಮೊಗಾ ಪ್ರಾಂತ್ಯದ ಹುಡುಗಿ ಹರ್ಮನ್ ಪ್ರೀತ್ ಕೌರ್ ಎಂಬುದನ್ನು ಕ್ರಿಕೆಟ್ ಅಭಿಮಾನಿಗಳು ಎಂದಿಗೂ ಮರೆಯುವಂತಿಲ್ಲ.