ನವದೆಹಲಿ: ಭಾರತ ತಂಡ 2007ರ ಟಿ-20 ವಿಶ್ವಕಪ್ ಗೆದ್ದಿದ್ದು ನಂಬಲಸಾಧ್ಯವಾಗಿತ್ತು ಎಂದು ಹಿರಿಯ ಭಾರತೀಯ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಆ ಟೂರ್ನಮೆಂಟ್ ಗೆದ್ದು ಭಾರತಕ್ಕೆ ಮರಳಿ ಬಂದಾಗ ತಂಡಕ್ಕೆ ಭಾರಿ ಪ್ರಮಾಣದ ಬೆಂಬಲ ದೊರಕಿತ್ತು ಎಂದು ಅವರು ಹೇಳಿದ್ದಾರೆ. 2007ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ತಂಡವನ್ನು ಮಣಿಸಿ ಕಪ್ ಎತ್ತಿ ಹಿಡಿದಿತ್ತು.
ಹರ್ಭಜನ್ ಸಿಂಗ್ ಮಾಜಿ ಕ್ರಿಕೆಟಿಗ ಆಕಾಶ್ ಚೊಪ್ರಾ ಜೊತೆ ನಡೆಸಿದ ಸಂವಾದದಲ್ಲಿ ತಮ್ಮ ವೃತ್ತಿ ಜೀವನದ 3 ಅತ್ಯಂತ ಅವಿಸ್ಮರಣೀಯ ಕ್ಷಣಗಳ ಬಗ್ಗೆ ಹೇಳಿದ್ದಾರೆ. 2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿ, 2007ರ ಟಿ - 20 ವಿಶ್ವಕಪ್ ಗೆದ್ದಿದ್ದು ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವು ಎಂದು ಅವರು ಹೇಳಿದ್ದಾರೆ.
ನಾನೊಬ್ಬ ಆಟಗಾರನಾಗಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ಅಗ್ರ ಸ್ಥಾನದಲ್ಲಿರಿಸುತ್ತೇನೆ. ಏಕೆಂದರೆ ಆ ಸರಣಿ ನನ್ನನ್ನು ಇಂದು ಒಬ್ಬ ಆಟಗಾರನನ್ನಾಗಿ ಗುರುತಿಸುವಂತೆ ಮಾಡಿದೆ. ನನ್ನ ಬಾಲ್ಯದ ಕನಸಿನತ್ತ ನೋಡಿದರೆ, ನಾನು ಯಾವಾಗಲೂ ವಿಶ್ವಕಪ್ ಗೆಲ್ಲಲು ಬಯಸಿದ್ದೆ. ಇದು 2011ರಲ್ಲಿ ನಿಜವಾಯಿತು. ಇದನ್ನು ನಾನು 2001 ರ ಸರಣಿಗೆ ಸಮಾನವಾಗಿ ನೋಡುತ್ತೇನೆ ಎಂದು ಆಕಾಶ್ ಚೊಪ್ರಾ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಹರ್ಭಜನ್ ಹೇಳಿದ್ದಾರೆ.
ಆದರೆ, 2007ರ ವಿಶ್ವಕಪ್ ಗೆದ್ದಿದ್ದು ಮಾತ್ರ ನಂಬಲಸಾಧ್ಯವಾಗಿತ್ತು. ನಾವು ಭಾರತಕ್ಕೆ ಮರಳಿದಾಗ ನಮಗೆ ದೊಡ್ಡ ಪ್ರಮಾಣದ ಬೆಂಬಲ ಸಿಕ್ಕಿತ್ತು. ನಾನು ಮೊದಲು ಅಂತಹ ಬೆಂಬಲವನ್ನು ಹಿಂದೆಂದು ನೋಡಿರಲಿಲ್ಲ. ಈ ಮೂರು ಕ್ಷಣಗಳಲ್ಲಿ ಯಾವುದಾದರು ಒಂದಕ್ಕೆ ಅಂಕ ಕೊಡಲು ಸಾಧ್ಯವಿಲ್ಲ. ಎಲ್ಲವೂ ನನಗೆ ಬಹಳ ವಿಶೇಷವಾದವು ಎಂದು ಹೇಳಿದ್ದಾರೆ.
ಭಾರತ 2011ರ ಫೈನಲ್ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿ 28 ವರ್ಷಗಳ ಬಳಿಕ ವಿಶ್ವಕಪ್ ಎತ್ತಿ ಹಿಡಿದಿತ್ತು. ಇನ್ನು 2001 ರ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಹರ್ಭಜನ್ ಸಿಂಗ್ 32 ವಿಕೆಟ್ ಪಡೆದಿದ್ದರು. ಆ ಸರಣಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಸಹ ಪಡೆದಿದ್ದರು. ಕೊನೆಯ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಭಜ್ಜಿ ಪ್ರಮುಖ ಪಾತ್ರವಹಿಸಿ ಐತಿಹಾಸಿಕ ಟೆಸ್ಟ್ ಸರಣಿ ಗೆಲ್ಲಲು ನೆರವಾಗಿದ್ದರು.
2007ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ 5 ರನ್ಗಳ ರೋಚಕ ಜಯ ಸಾಧಿಸಿ ಚೊಚ್ಚಲ ಟಿ-20 ವಿಶ್ವಕಪ್ ಎತ್ತಿ ಹಿಡಿದಿತ್ತು. ಗೌತಮ್ ಗಂಭೀರ್ 75 ರನ್ ಸಿಡಿಸಿ ಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು.