ಮುಂಬೈ: ರಾಜೀವ್ ಗಾಂಧಿ ಖೇಲ್ರತ್ನ ಅವಾರ್ಡ್ಗಾಗಿ ಸರಿಯಾದ ಸಮಯಕ್ಕೆ ದಾಖಲಾತಿಗಳನ್ನು ಲಗತ್ತಿಸಿದ್ದರೂ ಅದನ್ನು ಕೇಂದ್ರ ಸರ್ಕಾರದ ಕ್ರೀಡಾ ಇಲಾಖೆಗೆ ತಲುಪಿಸುವಲ್ಲಿ ವಿಳಂಬ ಮಾಡಿದವರ ಮೇಲೆ ಕ್ರಮ ಕೈಗೊಳ್ಳಿ ಎಂದು ಹರ್ಭಜನ್ ಸಿಂಗ್ ಪಂಜಾಬ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಭಾರತದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪಂಜಾಬ್ ಸರ್ಕಾರದ ಕ್ರೀಡಾ ಇಲಾಖೆಯಿಂದ ಭಜ್ಜಿ ಅರ್ಜಿ ಸಲ್ಲಿಸಿದ್ದರು. ಆದರೆ, ತಡವಾಗಿ ಕೇಂದ್ರದ ಕ್ರೀಡಾ ಇಲಾಖೆಗೆ ತಲುಪಿದ ಕಾರಣ ಭಜ್ಜಿಯ ಅರ್ಜಿ ತಿರಸ್ಕೃತಗೊಂಡಿತ್ತು. ಈ ಕಾರಣದಿಂದ ಕೋಪಗೊಂಡಿರುವ ಭಜ್ಜಿ ಕ್ರೀಡಾ ಇಲಾಖೆಗೆ ತಮ್ಮ ದಾಖಲಾತಿ ತಲುಪಲು ವಿಳಂಬವಾಗಿದ್ದಕ್ಕೆ ಕಾರಣವೇನು ಎಂಬುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ತನಿಖೆ ಮಾಡಿ ಕ್ರಮ ಕೈಗೊಳ್ಳಿ ಎಂದು ಭಜ್ಜಿ ಕಿಡಿಕಾರಿದ್ದಾರೆ.
2019 ರ ಸಾಲಿನ ಖೇಲ್ ರತ್ನ ಅವಾರ್ಡ್ಗೆ ಭಜ್ಜಿ ನಾಮನಿರ್ದೇಶನ ಅರ್ಜಿ ಸರಿಯಾದ ಸಮಯಕ್ಕೆ ತಲುಪಿದ್ದರೆ ಖಂಡಿತ ಈ ವರ್ಷ ಅವರಿಗೆ ಪ್ರಶಸ್ತಿ ಒಲಿಯುತ್ತಿತ್ತು. ಭಜ್ಜಿ ಪ್ರಶಸ್ತಿಗೆ ಲಗತ್ತಿಸಬೇಕಾದ ಎಲ್ಲ ದಾಖಲಾತಿಗಳನ್ನು ಮಾರ್ಚ್ 20ಕ್ಕೆ ಪಂಜಾಬ್ ಸರ್ಕಾರದ ಅಧಿಕಾರಿಗಳಿಗೆ ನೀಡಿದ್ದರು. ಮಾರ್ಚ್ 25 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಆದರೆ, ಅವರ ಅರ್ಜಿ ಜೂನ್ 25 ಕ್ಕೆ ತಲುಪಿದ್ದರಿಂದ ಕೇಂದ್ರ ಕ್ರೀಡಾ ಇಲಾಖೆ ಹರ್ಭಜನ್ರ ಅರ್ಜಿ ತಿರಸ್ಕರಿಸಿತ್ತು.
ಇದರಿಂದ ಬೇಸರಕ್ಕೊಳಗಾಗಿರುವ ಹರ್ಭಜನ್ ಯಾವುದೇ ಒಬ್ಬ ಕ್ರೀಡಾಪಟುವಿಗೆ ಅವನ ಸಾಧನೆಯನ್ನು ಗೌರವಿಸಿ ನೀಡುವ ಪ್ರಶಸ್ತಿಗಳು ಅವನಿಗೆ ತೃಪ್ತಿ ತಂದುಕೊಡುತ್ತವೆ. ಈ ರೀತಿ ನಿರ್ಲಕ್ಷ್ಯದ ಕಾರಣಗಳಿಂದ ಪ್ರಶಸ್ತಿ ಕೈತಪ್ಪಿದರೆ ಕ್ರೀಡಾಪಟುಗಳಿಗೆ ಬೇಸರವಾಗುತ್ತದೆ. ಮುಂದಿನ ಬಾರಿ ಕ್ರೀಡಾ ಇಲಾಖೆ ತಮ್ಮನ್ನು ಖೇಲ್ರತ್ನ ಪ್ರಶಸ್ತಿಗೆ ಪರಿಗಣಿಸಲಿದೆ ಎಂಬ ವಿಶ್ವಾಸವನ್ನೂ ಇದೇ ವೇಳೆ ವ್ಯಕ್ತಪಡಿಸಿದರು.