ಬೆಂಗಳೂರು: ಮಂಡಿರಜ್ಜು(ಹ್ಯಾಮ್‌ಸ್ಟ್ರಿಂಗ್) ಗಾಯಕ್ಕೆ ಒಳಗಾಗಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಚೇತರಿಸಿಕೊಂಡಿದ್ದರೂ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡದಿರುವುದು ಹಲವಾರು ಗೊಂದಲಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ ಗಾಯ ಅಷ್ಟೊಂದು ಗಂಭೀರವಾಗಿಲ್ಲ ಎಂದು ತಿಳಿದಿದ್ದ ರೋಹಿತ್, ಇದೀಗ ಆಸೀಸ್ ಪ್ರವಾಸಕ್ಕೆ ಸಿದ್ಧರಾಗುತ್ತಿರುವುದಾಗಿ ಹೇಳಿದ್ದಾರೆ.
ಆಯ್ಕೆ ವೇಳೆ ಹ್ಯಾಮ್‌ಸ್ಟ್ರಿಂಗ್‌ಗೆ ಒಳಗಾಗಿದ್ದ ರೋಹಿತ್ರನ್ನು ಆಯ್ಕೆ ಸಮಿತಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಗೆ ಮಾನ್ಯ ಮಾಡಿರಲಿಲ್ಲ. ಆದರೆ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡಿತ್ತು. ಐಪಿಎಲ್ನ ಫೈನಲ್ ಸೇರಿದಂತೆ ಕೊನೆಯ ಪಂದ್ಯಗಳಲ್ಲಿ ಆಡುವ ಮೂಲಕ ರೋಹಿತ್ ಫಿಟ್ನೆಸ್ ತೋರಿಸಿದ್ದರು. ಆದರೆ ಬಿಸಿಸಿಐ ನಿಯಮದ ಪ್ರಕಾರ ಗಾಯದಿಂದ ಚೇತರಿಸಿಕೊಂಡ ಆಟಗಾರ ಎನ್ಸಿಎನಲ್ಲಿ ಫಿಟ್ನೆಸ್ ಪರೀಕ್ಷೆಯನ್ನು ಕಡ್ಡಾಯವಾಗಿ ಎದರುರಿಸಬೇಕಿದೆ. ಹೀಗಾಗಿ ರೋಹಿತ್ ಪ್ರಸ್ತುತ ರಾಹುಲ್ ದ್ರಾವಿಡ್ ನೇತೃತ್ವದ ಎನ್ಸಿಎನಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ.
ಗಾಯದಿಂದ ಚೇತಿಸಿಕೊಳ್ಳುತ್ತಿದ್ದ ವೇಳೆ ಬಿಸಿಸಿಐ ಮತ್ತು ಮುಂಬೈ ಇಂಡಿಯನ್ಸ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೆ. ಆದರೆ ಹೊರಗಡೆ ನಡೆಯುತ್ತಿದ್ದ ಊಹಾಪೋಹಗಳ ಬಗ್ಗೆ ನನಗೆ ಗೊತ್ತಿರಲಲಿಲ್ಲ ಎಂದು ಹಿಟ್ ಮ್ಯಾನ್ ತಿಳಿಸಿದ್ದಾರೆ.
"ಹ್ಯಾಮ್ಸ್ಟ್ರಿಂಗ್ನಿಂದ ಈಗ ಗುಣವಾಗಿದ್ದೇನೆ. ಕೇವಲ ಫಿಟ್ನೆಸ್ ಕಾಯ್ದುಕೊಳ್ಳುವುದಕ್ಕೆ ಮತ್ತು ಬಲಿಷ್ಠನಾಗುವತ್ತ ಪ್ರಯತ್ನ ನಡೆಸುತ್ತಿದ್ದೇನೆ. ದೀರ್ಘ ಮಾದರಿಯ ಕ್ರಿಕೆಟ್ ಆಡುವುದಕ್ಕಿಂತ ಮೊದಲು ನಾನು ನನ್ನ ಮನಸ್ಸನ್ನು ಶುದ್ಧಿ ಮಾಡಿಕೊಳ್ಳಬೇಕು. ಅಲ್ಲಿ ಯಾವುದೇ ಹುಳುಕು ಉಳಿಯಬಾರದು. ಇದೇ ಕಾರಣಕ್ಕೆ ನಾನು ಎನ್‌ಸಿಎದಲ್ಲಿದ್ದೇನೆ" ಎಂದು ರೋಹಿತ್ ಹೇಳಿದ್ದಾರೆ.
ನಾನು 25 ದಿನಗಳ ಕಾಲ ನನ್ನ ದೇಹದ ಮೇಲೆ ಕೆಲಸ ಮಾಡಿದರೆ ಬಹುಶಃ ಟೆಸ್ಟ್ ಪಂದ್ಯಗಳನ್ನು ಆಡಬಹುದು. ಇದು ನನಗೆ ಸುಲಭದ ನಿರ್ಧಾರವಾಗಿತ್ತು. ಆದರೆ ಇದು ಬೇರೆಯವರಿಗೆ ಏಕೆ ಜಟಿಲವಾಗಿತ್ತು ಎಂದು ನನಗೆ ತಿಳಿದಿಲ್ಲ ಎಂದು ತಮ್ಮನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗುವುದು ಬೇಡ ಎನ್ನುತ್ತಿದ್ದವರ ಬಗ್ಗೆ ರೋಹಿತ್ ಹೀಗೆ ಹೇಳಿದ್ದಾರೆ.