ಲಾಹೋರ್: ಪಾಕಿಸ್ತಾನದ ಹಿರಿಯ ಆಟಗಾರರಾದ ಮುಹಮ್ಮದ್ ಹಫೀಜ್ ಮತ್ತು ಶೋಯೆಬ್ ಮಲಿಕ್ ಅವರು, ಮುಂಬರುವ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಲಿದ್ದಾರೆ ಎಂದು ಪಾಕಿಸ್ತಾನದ ಮುಖ್ಯ ಕೋಚ್ ಮಿಸ್ಬಾ-ಉಲ್-ಹಕ್ ಸ್ಪಷ್ಟಪಡಿಸಿದ್ದಾರೆ.
ಲಾಹೋರ್‌ನಲ್ಲಿ ಮಾತನಾಡಿದ ಅವರು, 2019ರ ಏಕದಿನ ವಿಶ್ವಕಪ್‌ನಿಂದ ತಂಡವು ನಿರ್ಗಮಿಸಿದ ನಂತರ, ಅವರಿಬ್ಬರನ್ನು ಪುನಃ ಬಾಂಗ್ಲಾದೇಶ ವಿರುದ್ಧದ ನಡೆದ ಟಿ-20 ಸರಣಿಗೆ ಕರೆಸಿಕೊಳ್ಳಲಾಯಿತು. ಅವರು ಆಗ ಉತ್ತಮ ಪ್ರದರ್ಶನ ನೀಡಿದ್ದರು. ಮುಂದೆಯೂ ಪಾಕಿಸ್ತಾನ ಕ್ರಿಕೆಟ್‌ಗೆ ಅವರಿಬ್ಬರು ಕೊಡುಗೆ ನೀಡಬೇಕಿದೆ ಎಂದರು. ಒಬ್ಬ ಆಟಗಾರ ಫಿಟ್ ಆಗಿರುವವರೆಗೂ, ತನ್ನ ತಂಡಕ್ಕೆ ಕೊಡುಗೆ ನೀಡಬಲ್ಲನು ಎಂದರು.
ನಮ್ಮ ತಂಡಕ್ಕೆ ಹಫೀಜ್ ಮತ್ತು ಮಲಿಕ್ ಅವರಂತಹ ಹಿರಿಯರ ಅವಶ್ಯಕತೆಯಿದೆ. ಶ್ರೀಲಂಕಾ ವಿರುದ್ಧ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ಸರಣಿಯ ನಂತರ, ತಂಡಕ್ಕೆ ಇನ್ನೂ ಹಿರಿಯ ಆಟಗಾರರ ಸೇವೆಯ ಅಗತ್ಯವಿದೆ ಎಂದು ಗೊತ್ತಾಗಿದೆ ಎಂದರು
ನಾವು ವಿಶ್ವಕಪ್ಗಾಗಿ ಬಲಿಷ್ಠ ತಂಡವನ್ನು ಕಟ್ಟಬೇಕಿದೆ. ಅದಕ್ಕಾಗಿಯೇ ಬಾಂಗ್ಲಾದೇಶ ವಿರುದ್ಧದ ಸರಣಿಯನ್ನು ಗೆಲ್ಲುವುದು ನಮಗೆ ಬಹಳ ಮುಖ್ಯವಾಗಿತ್ತು. ಹಫೀಜ್ ಮತ್ತು ಮಲಿಕ್ ಇಬ್ಬರೂ ಗೆಲುವಿಗೆ ಸಹಕರಿಸಿರುವುದು ನನಗೆ ನನಗೆ ಖುಷಿ ತಂದಿದೆ ಎಂದರು.