ಟ್ರೆನಿಟಾಡ್: ವಿಂಡೀಸ್ ಪ್ರವಾಸ ಕೈಗೊಂಡಿರುವ ಭಾರತ ಎ ತಂಡ 2ನೇ ಅನಧಿಕೃತ ಟೆಸ್ಟ್ನಲ್ಲಿ ಕನ್ನಡಿಗರಾದ ಮಯಾಂಕ್ (81) ಹಾಗೂ ಕೃಷ್ಣಪ್ಪ ಗೌತಮ್ (17ಕ್ಕೆ5) ಉತ್ತಮ ಪ್ರದರ್ಶನದ ನೆರವಿನಿಂದ ತಂಡ ಗೆಲುವಿನ ಸನಿಹ ನಿಂತಿದೆ.
ಈಗಾಗಲೇ ಏಕದಿನ ಸರಣಿಯನ್ನು 4-1ರಿಂದ ಕೈ ವಶ ಮಾಡಿಕೊಂಡಿರುವ ಭಾರತ ಎ ತಂಡ , ಟೆಸ್ಟ್ ಸರಣಿ ಗೆಲ್ಲಲು ಕೇವಲ 93 ರನ್ಗಳ ಅವಶ್ಯಕತೆ ಇದೆ.
ಮೊದಲ ಇನ್ನಿಂಗ್ಸ್ನಲ್ಲಿ ವಿಂಡೀಸ್ 318 ರನ್ ಗಳಿಸಿತ್ತು ಇದಕ್ಕುತ್ತರವಾಗಿ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 190 ರನ್ಗಳಿಗೆ ಆಲೌಟ್ ಆಗುವ ಮೂಲಕ 128 ರನ್ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ ಕನ್ನಡಿಗ ಕೆ. ಗೌತಮ್ ಕೇವಲ 17 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದು ಮಿಂಚಿದರು. ಇವರಿಗೆ ಸಾಥ್ ನೀಡಿದ ಸಂದೀಪ್ ವಾರಿಯರ್ 3 ವಿಕೆಟ್ ಪಡೆದು ವಿಂಡೀಸ್ ತಂಡವನ್ನು 149 ರನ್ಗಳಿಗೆ ಆಲೌಟ್ ಆಗುವಂತೆ ನೋಡಿಕೊಂಡರು.
278 ರನ್ಗಳ ಗುರಿ ಬೆನ್ನತ್ತಿರುವ ಭಾರತ ತಂಡ 3ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿದೆ. ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ಮಯಾಂಕ್ ಅಗರ್ವಾಲ್ 134 ಎಸೆತಗಳಲ್ಲಿ 10 ಬೌಂಡರಿ ಸಮೇತ 81 ರನ್ಗಳಿಸಿ ಔಟ್ ಆದ್ರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಪ್ರಿಯಾಂಕ್ ಪಾಂಚಾಲ್ 68 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಭಾರತ ತಂಡಕ್ಕೆ ಪಂದ್ಯ ಗೆಲ್ಲಲು ಕೊನೆಯ ದಿನ ಇನ್ನೂ 93 ರನ್ಗಳ ಅವಶ್ಯಕತೆಯಿದೆ. 16 ರನ್ಗಳಿಸಿರುವ ಅಭಿಮನ್ಯು ಈಶ್ವರನ್ ಹಾಗೂ ಅನ್ಮೋಲ್ಪ್ರೀತ್ ಸಿಂಗ್ 4 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.