ಮುಂಬೈ: ದಾದಾ ನಾಯಕತ್ವದ ನಂತರ ಭಾರತ ತಂಡ ಬಲಿಷ್ಠವಾಯಿತು, ವಿದೇಶಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಗೆಲ್ಲುವಂತಾಯಿತು. ನಾವು ಅವರು ಹಾಕಿಕೊಟ್ಟ ಹಾದಿಯಲ್ಲಿ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂದು ಬಾಂಗ್ಲಾ ದೇಶದ ಪರ ಹಗಲು ರಾತ್ರಿ ಟೆಸ್ಟ್ ಪಂದ್ಯ ಗೆದ್ದ ನಂತರ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದರು.
ಕ್ಯಾಪ್ಟನ್ ಕೊಹ್ಲಿ ನೀಡಿದ್ದ ಈ ಹೇಳಿಕೆಯಿಂದ ಸಿಟ್ಟಿಗೆದ್ದ ಗವಾಸ್ಕರ್ ಭಾರತ ತಂಡ 70-80ರಲ್ಲಿ ವಿದೇಶಗಳಲ್ಲಿ ಟೆಸ್ಟ್ ಪಂದ್ಯಗಳನ್ನು ಗೆದ್ದಿತ್ತು. ಆಗ ಕೊಹ್ಲಿ ಇನ್ನೂ ಹುಟ್ಟಿರಲಿಲ್ಲ. ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ಅವರನ್ನು ಮೆಚ್ಚಿಸಲು ಕೊಹ್ಲಿ ಆ ರೀತಿ ಹೇಳಿದ್ದಾರೋ, ಏನೋ? ಎಂದು ಕಿಡಿಕಾಡಿದ್ದರು.
ಆದರೆ, ಕೊಹ್ಲಿ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಗಂಭೀರ್, ದಾದಾ ಕುರಿತು ಕೊಹ್ಲಿ ಹೇಳಿಕೆ ಆತನ ವೈಯಕ್ತಿಕ ಆಲೋಚನೆ. ಆದರೆ, ಅದರಲ್ಲಿ ಯಾವುದೇ ಅನುಮಾನಗಳಿಲ್ಲ. ಭಾರತ ತಂಡ ವಿದೇಶದಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಗೆದ್ದಿರೋದು ಗಂಗೂಲಿ ನಾಯಕನಾದ ಮೇಲೆ ಎಂದಿದ್ದಾರೆ.
ಗವಾಸ್ಕರ್ ಮತ್ತು ಕಪಿಲ್ದೇವ್ ನಾಯಕತ್ವದಲ್ಲಿ ಭಾರತ ತಂಡ ತವರಿನಲ್ಲಿ ಎಲ್ಲಾ ತಂಡಗಳ ವಿರುದ್ಧ ಪ್ರಾಬಲ್ಯ ಸಾಧಿಸಿತ್ತು. ಆದರೆ, ಗಂಗೂಲಿ ನೇತೃತ್ವದಲ್ಲಿ ಭಾರತದಿಂದಾಚೆಗೆ ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಶುರು ಮಾಡಿದೆವು. ನಾನು ಕೊಹ್ಲಿ ಹೇಳಿಕೆಯನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿ ಕೊಹ್ಲಿಯನ್ನು ಬೆಂಬಲಿಸಿ ಗವಾಸ್ಕರ್ ಟೀಕೆಗೆ ಸಡ್ಡು ಹೊಡೆದಿದ್ದಾರೆ ಗೌತಮ್ ಗಂಭೀರ.