ನವದೆಹಲಿ: ಭಾರತೀಯ ಕ್ರಿಕೆಟ್ ತಂಡ ಪ್ರತಿನಿಧಿಸಿರುವ ಎಲ್ಲ ನಾಯಕರು ವಿಭಿನ್ನವಾಗಿದ್ದು, ನನಗೂ ಅನೇಕ ಸಲ ನಿಮಗೆ ಇಷ್ಟವಾದ ಕ್ಯಾಪ್ಟನ್ ಯಾರು ಎಂದು ಪ್ರಶ್ನೆ ಮಾಡಲಾಗಿದೆ ಎಂದು ಟೀಂ ಇಂಡಿಯಾ ವೇಗಿ ಆಶಿಶ್ ನೆಹ್ರಾ ಹೇಳಿಕೊಂಡಿದ್ದಾರೆ.
ಸರಿಸುಮಾರು ಎರಡು ದಶಕಗಳ ಕಾಲ ಇಂಡಿಯನ್ ಕ್ರಿಕೆಟ್ನಲ್ಲಿ ಭಾಗಿಯಾಗಿರುವ ಆಶಿಶ್ ನೆಹ್ರಾ 2003ರ ರನ್ನರ್ ಅಪ್ ತಂಡ, 2011 ಐಸಿಸಿ ವಿಶ್ವಕಪ್ ವಿಜೇತ ತಂಡದ ವೇಳೆ ಪ್ಲೇಯರ್ ಆಗಿದ್ದರು. ಸೌರವ್ ಗಂಗೂಲಿ ಹಾಗೂ ಎಂಎಸ್ ಧೋನಿ ನಾಯಕತ್ವದ ವೇಳೆ ತಂಡದ ಭಾಗವಾಗಿದ್ದ ಆಶಿಶ್ ನೆಹ್ರಾ ಎಲ್ಲ ನಾಯಕರು ವಿಭಿನ್ನವಾಗಿ ಟೀಂ ಇಂಡಿಯಾ ಕ್ರಿಕೆಟ್ ಮುನ್ನಡೆಸಿದ್ದು, ಅವರು ಒಬ್ಬರಿಗಿಂತಲೂ ವಿಭಿನ್ನವಾಗಿದ್ದರು ಎಂದು ತಿಳಿಸಿದ್ದಾರೆ.
ಅಜರುದ್ದೀನ್ ಗಿಂತ ಮುಂಚೆ ತಂಡದ ಕ್ಯಾಪ್ಟನ್ ಆಗಿ ಕಪಿಲ್ ದೇವ್, ಸುನಿಲ್ ಗವಾಸ್ಕರ್, ವೆಂಕಟ್ರಾಘವನ್ ಹಾಗೂ ಅಜಿತ್ ವಾಡೇಕರ್ ಇದ್ದರು. ಇವರ ಕಾಲದ ಪ್ಲೇಯರ್ ಬಳಿ ನಿಮಗೆ ಯಾರು ಉತ್ತಮ ನಾಯಕ ಎಂದು ಕೇಳಿದ್ರೆ ಯಾರದಾದ್ರೂ ಒಬ್ಬರ ಹೆಸರು ಹೇಳ್ತಾರೆ ಎಂದಿದ್ದಾರೆ. ಆದರೆ ಮೂರು ಸಲ ವಿಶ್ವಕಪ್ ಕ್ರಿಕೆಟ್ ಕ್ಯಾಪ್ಟನ್ ಆಗಿದ್ದ ಮೊಹಮ್ಮದ್ ಅಜುರುದ್ದಿನ್ ಹೆಸರು ಹೇಳುವುದಿಲ್ಲ ಎಂಬುದನ್ನೂ ನೆನಪಿಸಿದ್ದಾರೆ.
ನಾನು ಕೂಡ ಗಂಗೂಲಿ ಹಾಗೂ ಧೋನಿ ನಾಯಕತ್ವದಲ್ಲಿ ಕ್ರಿಕೆಟ್ ಆಡಿದ್ದೇನೆ. ಇಬ್ಬರು ವಿಭಿನ್ನ ಕ್ಯಾಪ್ಟನ್ಗಳು. ಗಂಗೂಲಿ ಸಮಯದಲ್ಲಿ ಅನೇಕ ಸವಾಲು ತೆಗೆದುಕೊಂಡು ಉತ್ತಮ ತಂಡ ಕಟ್ಟಿದ್ದಾರೆ. ಈ ವೇಳೆ ಪ್ಲೇಯರ್ಗಳಿಗೋಸ್ಕರ ಅವರು ಬಿಸಿಸಿಐ ಹಾಗೂ ಆಯ್ಕೆ ಸಮಿತಿ ವಿರುದ್ಧ ಫೈಟ್ ಮಾಡುತ್ತಿದ್ದರು. ತಮಗೆ ಇಷ್ಟವಾದ ಆಟಗಾರರು ತಂಡದಲ್ಲಿ ಇರಲೇಬೇಕು ಎಂದು ಹಠ ಹಿಡಿಯುತ್ತಿದ್ದರು. ಆದರೆ ಮಹೇಂದ್ರ ಸಿಂಗ್ ಧೋನಿ ತುಂಬಾ ಕೂಲ್ ಕ್ಯಾಪ್ಟನ್ ಎಂದಿದ್ದಾರೆ.
ಎಂ.ಎಸ್ ಧೋನಿ ನಾಯಕತ್ವದ ವೇಳೆ ತೆಂಡೂಲ್ಕರ್, ದ್ರಾವಿಡ್, ಲಕ್ಷ್ಮಣ್ರಂತಹ ಹಿರಿಯ ಆಟಗಾರರನ್ನು ತಂಡದಲ್ಲಿರಿಸಿಕೊಂಡು ಮುನ್ನಡೆಸಿಕೊಂಡಿದ್ದು ನಿಜಕ್ಕೂ ಉತ್ತಮ ಎಂದಿರುವ ವೇಗಿ ನೆಹ್ರಾ, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ರಂತಹ ಆಟಗಾರರೊಂದಿಗೆ ಟೀಂ ಕಟ್ಟಿದ್ದು ಅದ್ಭುತ ಎಂದಿದ್ದಾರೆ. 2007ರಲ್ಲಿ ಹಿರಿಯ ಆಟಗಾರರ ನಡುವೆ ಕೂಡ ತಂಡದ ಕ್ಯಾಪ್ಟನ್ ಆಗಿ ಟಿ-20 ವಿಶ್ವಕಪ್ ಗೆದ್ದಿರುವುದು ನಿಜಕ್ಕೂ ಅದ್ಭುತ ಎಂದು ಕೊಂಡಾಡಿದ್ದಾರೆ.