ಮುಂಬೈ: ಕಳೆದ ನಾಲ್ಕು ವರ್ಷಗಳ ಟೀಂ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಎಂ.ಎಸ್.ಕೆ. ಪ್ರಸಾದ್ ಕಾರ್ಯಾವಧಿಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಲಿ ಮುಖ್ಯಸ್ಥರ ಅವಧಿ ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ.
ಬಿಸಿಸಿಐ ನೀತಿಯ ಪ್ರಕಾರ ಆಯ್ಕೆ ಸಮಿತಿ ಮುಖ್ಯಸ್ಥರ ಕಾರ್ಯಾವಧಿ ನಾಲ್ಕು ವರ್ಷವಾಗಿದ್ದು, ಇದಕ್ಕೆ ತಿದ್ದುಪಡಿ ತಂದು ಐದು ವರ್ಷಕ್ಕೆ ವಿಸ್ತರಿಸುವ ಬಗ್ಗೆ ಮಾತುಗಳು ಕೇಳಿಬಂದಿದ್ದವು. ಆದರೆ, ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಹಳೆಯ ನೀತಿಗೆ ಒಲವು ಸೂಚಿಸಿದ ಪರಿಣಾಮ ಎಂ.ಎಸ್.ಕೆ. ಪ್ರಸಾದ್ ಅವಧಿ ಮುಕ್ತಾಯವಾಗಿದೆ.
ಎಂ.ಎಸ್.ಕೆ. ಪ್ರಸಾದ್ ಹಾಗೂ ಗಗನ್ ಖೋಡಾ 2015, ಜತಿನ್ ಪರಾಂಜಪೆ, ಸರನ್ದೀಪ್ ಸಿಂಗ್ ಮತ್ತು ದೇವಾಂಗ್ ಗಾಂಧಿ 2016ರಲ್ಲಿ ಆಯ್ಕೆ ಸಮಿತಿ ಸೇರಿದ್ದರು. ಇದರಲ್ಲಿ ಕೊನೆಯ ಮೂರು ಮಂದಿ ಮೂರು ವರ್ಷವಷ್ಟೇ ಪೂರೈಸಿದ್ದಾರೆ. ಆದರೆ, ಭಾನುವಾರ ಮುಂಬೈನಲ್ಲಿ ನಡೆದ ಬಿಸಿಸಿಐನ 88ನೇ ವಾರ್ಷಿಕ ಸಭೆಯಲ್ಲಿ ಗಂಗೂಲಿ ಹೇಳಿಕೆಯ ಪ್ರಕಾರ ಹಾಲಿ ಸಮಿತಿ ಐವರ ಅವಧಿಯೂ ಮುಕ್ತಾಯವಾಗಿದೆ.
ಭಾರಿ ಟೀಕೆಗೆ ಗುರಿಯಾಗಿದ್ದ ಆಯ್ಕೆ ಸಮಿತಿ:
ಕಳೆದ ಐದು ವರ್ಷದಲ್ಲಿ ಆಯ್ಕೆ ಸಮಿತಿ ಹಲವು ದಿಟ್ಟ ನಿರ್ಧಾರ ಕೈಗೊಂಡು ಯಶಸ್ವಿಯಾಗಿದ್ದರೂ ಸಹ ಭಾರಿ ಟೀಕೆಗೂ ಒಳಗಾಗಿತ್ತು. ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಹಿರಿಯ ಆಟಗಾರರು ಆಯ್ಕೆ ಸಮಿತಿ ವಿರುದ್ಧ ಆಗಾಗ್ಗೆ ಅಸಮಾಧಾನ ಹೊರಹಾಕುತ್ತಲೇ ಇದ್ದರು. ಯುವರಾಜ್ ಸಿಂಗ್, ಗೌತಮ್ ಹಾಗೂ ಅಂಬಟಿ ರಾಯಡು ಗಂಭೀರ್ ಆಯ್ಕೆ ಸಮಿತಿ ವಿರುದ್ಧ ಟೀಕೆ ಮಾಡಿದ್ದು ದೊಡ್ಡಮಟ್ಟದಲ್ಲಿ ಸುದ್ದಿ ಮಾಡಿತ್ತು.
ವಿಂಡೀಸ್ ಸರಣಿಗೆ ಟೀಂ ಇಂಡಿಯಾವನ್ನು ಆಯ್ಕೆ ಮಾಡಿದ್ದು, ಪ್ರಸಾದ್ ಸಮಿತಿಯ ಕೊನೆಯ ಆಯ್ಕೆಯಾಗಿತ್ತು. ವಿಶೇಷವೆಂದರೆ ಕೊನೆಯ ಆಯ್ಕೆಯೂ ಟೀಕೆಯಿಂದ ಮುಕ್ತವಾಗಿರಲಿಲ್ಲ. ಪ್ರತಿಭಾವಂತ ಆಟಗಾರ ಸಂಜು ಸ್ಯಾಮ್ಸನ್ ಕೈಬಿಟ್ಟು, ಸತತ ವೈಫಲ್ಯ ಅನುಭವಿಸುತ್ತಿರುವ ರಿಷಭ್ ಪಂತ್ ಆಯ್ಕೆ ಮಾಡಿದ್ದು, ಭಾರಿ ಟೀಕೆಗೆ ಗುರಿಯಾಗಿತ್ತು.