ನವದೆಹಲಿ: ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಹೆಚ್ಚು ಪ್ರಭಾವ ಬೀರುತ್ತಿದ್ದಾರೆ ಎಂದು ಭಾರತದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ವೈಟ್ ಬಾಲ್ ಕ್ರಿಕೆಟ್ ಹೊಡೆತದ ಮೇಲೆ ನಿಂತಿದೆ. ಕೊಹ್ಲಿ ಇದೀಗ ಶ್ರೇಷ್ಠ ಆಟಗಾರರಾಗಿದ್ದಾರೆ. ಆದರೆ ರೋಹಿತ್ ಕೊಹ್ಲಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಆಡಬಲ್ಲರು. ಯಾಕೆಂದರೆ ಅವರ ಹೊಡೆತಗಳು ಆ ರೀತಿ ಇವೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಇದೀಗ ವಿಶ್ವದ ಅತ್ಯುತ್ತಮ ಸೀಮಿತ ಓವರ್‌ಗಳ ಕ್ರಿಕೆಟಿಗ ಎಂದು ನಾನು ಭಾವಿಸುತ್ತೇನೆ. ಅವರು ಜಗತ್ತಿನಲ್ಲಿ ಎಲ್ಲಾ ರೀತಿಯಲ್ಲೂ ಶ್ರೇಷ್ಠರಲ್ಲದಿರಬಹುದು. ಆದರೆ ಈ ಸಮಯದಲ್ಲಿ ನನ್ನ ಪ್ರಕಾರ ಅವರು ಅತ್ಯುತ್ತಮರು. 3 ಏಕದಿನ ದ್ವಿಶತಕ, 5 ವಿಶ್ವಕಪ್ ಶತಕ(ಒಂದೇ ಆವೃತ್ತಿಯಲ್ಲಿ)ಗಳನ್ನು ಹೊಡೆದ ಏಕೈಕ ಆಟಗಾರ ಅವರು ಎಂದು ಗಂಭೀರ್ ರೋಹಿತ್ರನ್ನು ಹೊಗಳಿದ್ದಾರೆ.
ಕೊಹ್ಲಿ ಮತ್ತು ರೋಹಿತ್ ಬಗ್ಗೆ ಇನ್ನಷ್ಟು ಮಾತನಾಡಿ, ಇವರಿಬ್ಬರನ್ನೂ ಹೋಲಿಸುವುದು ತುಂಬಾ ಕಷ್ಟ. ವಿರಾಟ್ ಕೊಹ್ಲಿ ನಂಬಲಸಾಧ್ಯವಾದ ಅಮೋಘ ಆಟವನ್ನು ಆಡುತ್ತಿದ್ದಾರೆ. ಅವರ ಅಂಕಿ-ಅಂಶಗಳೇ ಅದನ್ನು ಸಾಬೀತುಪಡಿಸುತ್ತವೆ ಎಂದು ಗಂಭಿರ್ ಅಭಿಪ್ರಾಯಪಟ್ಟಿದ್ದಾರೆ.
33ರ ಹರೆಯದ ರೋಹಿತ್ ಶರ್ಮಾ, 224 ಏಕದಿನ ಪಂದ್ಯಗಳಿಂದ 9,915 ರನ್ ಗಳಿಸಿದ್ದಾರೆ. 49.27ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ರೋಹಿತ್, 88.92 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ. ಇನ್ನು 29 ಶತಕ ಮತ್ತು 43 ಅರ್ಧಶತಕ ಸಿಡಿಸಿದ್ದಾರೆ. ಟಿ-20 ಫಾರ್ಮೆಟ್ನಲ್ಲಿ 108 ಪಂದ್ಯಗಳಿಂದ 32.62 ಸರಾಸರಿಯಲ್ಲಿ 2273 ರನ್ ಗಳಿಸಿದ್ದಾರೆ. ಭರ್ಜರಿ 138.78 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಇನ್ನೊಂದೆಡೆ 31ರ ಹರೆಯದ ಕೊಹ್ಲಿ 248 ಏಕದಿನ ಪಂದ್ಯಗಳಿಂದ 11,867 ರನ್ ಗಳಿಸಿದ್ದಾರೆ. 59.33 ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ನಾಯಕ, 93.25 ಸ್ಟ್ರೈಕ್ ರೇಟ್ ಮೈಂಟೇನ್ ಮಾಡಿದ್ದಾರೆ. 43 ಶತಕ ಹಾಗೂ 58 ಅರ್ಧಶತಕಗಳನ್ನು ಗಳಿಸಿ ದಾಖಲೆ ಬರೆದಿದ್ದಾರೆ. ಇನ್ನು 82 ಟಿ-20 ಪಂದ್ಯಗಳಿಂದ 50.80 ಸರಾಸರಿಯಲ್ಲಿ 2794 ರನ್ ಗಳಿಸಿರುವ ಕೊಹ್ಲಿ,138.24 ಸ್ಟ್ರೈಕ್ ರೇಟ್ ಕಾಯ್ದುಕೊಂಡಿದ್ದಾರೆ.