ಕೋಲ್ಕತ್ತಾ: ಭಾರತದ ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಅವರ ಪತ್ನಿ ಹಾಗೂ ಪಶ್ಚಿಮ ಬಂಗಾಳದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಸ್ಮಿತಾ ಸನ್ಯಾಲ್ ಶುಕ್ಲಾ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಡಪಟ್ಟಿದೆ.
ಭಾರತದ ಪರ 3 ಏಕದಿನ ಪಂದ್ಯವನ್ನಾಡಿರುವ ಶುಕ್ಲಾ ಐಪಿಎಲ್ನಲ್ಲಿ ಕೆಕೆಆರ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಪರ ಆಡಿದ್ದರು. ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿದ್ದಾರೆ.
ದೇಶದಲ್ಲಿ ಎರಡನೇ ಹಂತದ ಅನ್ಲಾಕ್ ಘೋಷಣೆಯಾದ ಮೇಲೆ ಪ್ರತಿದಿನ ಕೋವಿಡ್ 27 ಸಾವಿರಕ್ಕೂ ಹೆಚ್ಚು ಕೇಸ್ಗಳು ದಾಖಲಾಗುತ್ತಿವೆ. ಇನ್ನು ಪಶ್ಚಿಮ ಬಂಗಾಳದಲ್ಲೂ 27109 ಪ್ರಕರಣಗಳಿದ್ದು, 9000 ಸಕ್ರಿಯ ಪ್ರಕರಣಗಳಿವೆ. 880 ಮಂದಿ ಕೊರೊನಾ ಬಲಿಯಾಗಿದ್ದಾರೆ.
ತಮ್ಮ ಪತ್ನಿಗೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿರುವುದನ್ನು ಸ್ವತಃ ಶುಕ್ಲಾ ಮಾದ್ಯಮದಕ್ಕೆ ತಿಳಿಸಿದ್ದಾರೆ. ಪತ್ನಿ , ತಾವೂ ಹಾಗೂ ಕುಟುಂಬ ಸದಸ್ಯರು ಹೋಮ್ ಐಸೋಲೇಸನ್ಲ್ಲಿರುವುದಾಗಿ ಮಾಹಿತಿ ನೀಡಿದ್ದಾರೆ.
' ಹೌದು, ನನ್ನ ಪತ್ನಿಗೆ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ಜ್ವರದ ಲಕ್ಷಣ ಕಾಣಿಸಿಕೊಂಡಿದ್ದರಿಂದ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದರು. ಅವರಿಗೆ ಸೋಂಕು ತಗುಲಿರುವುದು ವರದಿಯಲ್ಲಿ ಖಾತ್ರಿಯಾಗಿದೆ. ನನ್ನ ಇಬ್ಬರು ಗಂಡು ಮಕ್ಕಳು, ವಯಸ್ಸಾದ ಅಪ್ಪ ಸೇರಿದಂತೆ ಎಲ್ಲರೂ ಸ್ವಯಂ ಕ್ವಾರಂಟೈನ್ನಲ್ಲಿರಲಿದ್ದೇವೆ. ನಾವು ಕೂಡ ಗುರುವಾರ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೇವೆ' ಎಂದು ಶುಕ್ಲಾ ಅವರು ಶನಿವಾರ ತಿಳಿಸಿದ್ದಾರೆ.