ಹೈದರಾಬಾದ್: 2020ರ ಯುಎಇನಲ್ಲಿ ನಡೆಯುತ್ತಿರುವುದೇ ಒಂದು ಅಚ್ಚರಿ. ಆದರೆ, 13ನೇ ಆವೃತ್ತಿಯಲ್ಲಿ ಫ್ರಾಂಚೈಸಿಗಳ ಕೆಲವು ನಿರ್ಧಾರಗಳು ಅಭಿಮಾನಿಗಳಿಗೆ ಅಶ್ಚರ್ಯವನ್ನುಂಟು ಮಾಡಿವೆ. ಅದರಲ್ಲಿ ಮಧ್ಯಮ ಕ್ರಮಾಂಕದ ಆಲ್ರೌಂಡರ್ ಬೆನ್ಸ್ಟೋಕ್ಸ್ರನ್ನು ಆರಂಭಿಕರಾಗಿ ಕಣಕ್ಕಿಳಿಸಿರುವುದು ಒಂದು.
ಬೆನ್ಸ್ಟೋಕ್ಸ್ ಮಾತ್ರವಲ್ಲದೆ, ಆರ್ಸಿಬಿಯಿಂದ ಎಬಿಡಿ,ಕೆಕೆಆರ್‌ನಿಂದ ನರೈನ್ರ ಬ್ಯಾಟಿಂಗ್ ಕ್ರಮಾಂಕಗಳ ಬದಲಾವಣೆ ನಿಜಕ್ಕೂ ಆಶ್ಚರ್ಯ ತರುವಂತದ್ದಾಗಿದೆ.
ಐಪಿಎಲ್ನಲ್ಲಿ ಕಂಡುಬಂದಿರುವ ಟಾಪ್ 5 ಪ್ರಯೋಗಗಳು
ಬೆನ್ಸ್ಟೋಕ್ಸ್ ಆರಂಭಿಕನಾಗಿ ಕಣಕ್ಕೆ
ಇಂಗ್ಲೆಂಡ್ ತಂಡದಲ್ಲಿಸ್ಟೋಕ್ಸ್ ಒಬ್ಬ ಪ್ರತಿಭಾವಂತ ಪವರ್ ಹಿಟ್ಟರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ರುಜುವಾತು ಮಾಡಿದ್ದಾರೆ. ಆದರೆ, ಈ ಬಾರಿ ರಾಜಸ್ಥಾನ್ ರಾಯಲ್ಸ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸುವ ಮೂಲಕ ಪ್ರಯೋಗ ಮಾಡಿತ್ತು. ಆದರೆ, ಇದು ಮೊದಲ 5 ಪಂದ್ಯಗಳಲ್ಲಿ ಭಾರಿ ವೈಫಲ್ಯ ಅನುಭವಿಸಿತು. ಆದರೆ, ಕಳೆದ ಪಂದ್ಯದಲ್ಲಿ ಮಾತ್ರ ಮುಂಬೈ ವಿರುದ್ಧ ಕೇವಲ 60 ಎಸೆತಗಳಲ್ಲಿ ಅಜೇಯ 107 ರನ್ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜೊತೆಗೆ ತಮ್ಮ ಸಿಕ್ಸರ್ಗಳ ಬರವನ್ನು ನೀಗಿಸಿಕೊಂಡರು.
ಮಧ್ಯಮ ಕ್ರಮಾಂಕದಲ್ಲಿ ಸುನೀಲ್ ನರೈನ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಿಸ್ಟರಿ ಸ್ಪಿನ್ನರ್ ಸುನೀಲ್ ನರೈನ್ ಕಳೆದ ಎರಡು ಆವೃತ್ತಿಗಳಿಂದ ಕೆಕೆಆರ್ ಪರ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದರು. ಆದರೆ, ಬೌಲಿಂಗ್ ಆ್ಯಕ್ಷನ್ ಪರೀಕ್ಷೆ ಎದುರಿಸಿ ಬಂದ ನಂತರ ಮಾರ್ಗನ್ ನೇತೃತ್ವದ ತಂಡ ಅವರನ್ನು 5ನೇ ಕ್ರಮಾಂಕಕ್ಕೆ ತಳ್ಳಿತ್ತು. ಮೊದಲ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕದ ಜೊತೆಗೆ ನಿತೀಶ್ ರಾಣಾ ಜೊತೆಗೆ 115 ರನ್ಗಳ ಜೊತೆಯಾಟ ನಡೆಸಿದ್ದ ಅವರು ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ವಿಫಲರಾಗಿದ್ದರು.
ಮನೀಶ್ ಪಾಂಡೆಗೆ 5ನೇ ಕ್ರಮಾಂಕ
ಭಾರತ ತಂಡದಲ್ಲಿ ಅಪ್ಪರ್ ಆರ್ಡರ್ನಲ್ಲಿ ಮನೀಶ್ ಪಾಂಡೆಗೆ ಅವಕಾಶ ಸಿಗುತ್ತಿಲ್ಲ ಎಂಬ ದೂರುಗಳು ಬಹಳ ವರ್ಷಗಳಿಂದ ಕೇಳಿಬರುತ್ತಿವೆ. ಆದರೆ, ಈ ಬಾರಿ ಐಪಿಎಲ್ನಲ್ಲೂ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಲು ಮನೀಶ್‌ರನ್ನು 5ನೇ ಕ್ರಮಾಂಕಕ್ಕೆ ಹಿಂಬಡ್ತಿ ನೀಡಲಾಗಿತ್ತು. ಆದರೆ, ಅವರು ಕೇವಲ 6 ರನ್ಗಳಿಸಿ ಔಟಾಗಿದ್ದರು. ನಂತರ ಮತ್ತೆ ರಾಜಸ್ಥಾನ್ ರಾಯಲ್ಸ್ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಕೇವಲ 43 ಎಸೆತಗಳಲ್ಲಿ 81 ರನ್ ಸಿಡಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದ್ದರು.
ಎಬಿಡಿ ವಿಲಿಯರ್ಸ್ಗೆ 6ನೇ ಕ್ರಮಾಂಕ
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸ್ಪಿನ್ನರ್ಗಳ ವಿರುದ್ಧ ಆಡುವುದನ್ನು ತಪ್ಪಿಸಲು ಎಬಿಡಿ ವಿಲಿಯರ್ಸ್ರನ್ನು 6ನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗಿತ್ತು. ಇದು ಕ್ರಿಕೆಟ್ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಏಕೆಂದರೆ, ಅದರ ಹಿಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 33 ಎಸೆತಗಳಲ್ಲಿ 73 ರನ್ ಚಚ್ಚಿದ್ದರು. ನಂತರ ಪಂಜಾಬ್ ವಿರುದ್ಧ ಸೋಲನುಭವಿಸಿದ ನಂತರ ಮುಂದಿನ ಪಂದ್ಯದಲ್ಲಿ ತಮ್ಮ 4ನೇ ಕ್ರಮಾಂಕಕ್ಕೆ ಆಗಮಿಸಿ ಕೇವಲ22 ಎಸೆತಗಳಲ್ಲಿ 55 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ಸ್ಯಾಮ್ ಕರ್ರನ್ಗೆ ಆರಂಭಿಕ ಸ್ಥಾನ
ಆರಂಭಿಕರ ಸತತ ವೈಫಲ್ಯ, ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ಸಿಎಸ್ಕೆ ತಂಡ ಕೊನೆಗೆ ಸ್ಯಾಮ್ ಕರ್ರನ್ರನ್ನು ಆರಂಭಿಕರಾಗಿ ಕಣಕ್ಕಿಳಿಸುವ ಮೂಲಕ ಬಹುದೊಡ್ಡ ಪ್ರಯೋಗ ನಡೆಸಿತ್ತು. ಆದರೆ, ಅದು ಯಶಸ್ವಿಯಾಗದ ಕಾರಣ ಮತ್ತೆ ಕೆಳ ಕ್ರಮಾಂಕಕ್ಕೆ ಮರಳಿ ಮುಂಬೈ ಇಂಡಿಯನ್ಸ್ ವಿರುದ್ಧ ಆಕರ್ಷಕ ಆರ್ಧಶತಕ ದಾಖಲಿಸಿದ್ದರು.