ಸೌತಾಂಪ್ಟನ್: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗಾನ್ ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಅವರ ದಾಖಲೆಯನ್ನ ಪುಡಿಗಟ್ಟಿದ್ದಾರೆ. ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವೆ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಎಡಗೈ ಬ್ಯಾಟ್ಸ್‌ಮನ್ ಈ ಸಾಧನೆ ಮಾಡಿದ್ದಾರೆ.
ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ ನಾಯಕನಾಗಿ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದ 332 ಪಂದ್ಯಗಳಲ್ಲಿ, 211 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮೋರ್ಗಾನ್ ಕೇವಲ 163 ಪಂದ್ಯಗಳಲ್ಲಿ 213 ಸಿಕ್ಸರ್ ಸಿಡಿಸಿ ಧೋನಿ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 324 ಪಂದ್ಯಗಳಲ್ಲಿ 171 ಸಿಕ್ಸರ್ ಸಿಡಿಸಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಮೋರ್ಗಾನ್ ಐರ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ 106 ರನ್ ಗಳಿಸಿ ಔಟಾದರು. ಅವರ ಈ ಇನ್ನಿಂಗ್ಸ್ ನಲ್ಲಿ 15 ಬೌಂಡರಿ ಮತ್ತು ನಾಲ್ಕು ಅದ್ಭುತ ಸಿಕ್ಸರ್‌ಗಳಿದ್ದವು. ಐವತ್ತು ಓವರ್‌ಗಳಲ್ಲಿ ಇಂಗ್ಲೆಂಡ್ 328 ರನ್‌ಗಳ ಬೃಹತ್ತ ಮೊತ್ತ ಕಲೆಹಾಕಿತು.
ಈ ಗುರಿಯನ್ನ ಬೆನ್ನಟ್ಟಿದ ಐರ್ಲೆಂಡ್ ತಂಡ ಪಾಲ್ ಸ್ಟಿರ್ಲಿಂಗ್ ಮತ್ತು ಆಂಡಿ ಬಾಲ್ಬಿರ್ನಿ ಶತಕದ ಅಬ್ಬರದಿಂದ 49.5 ಓವರ್‌ಗಳಲ್ಲಿ ಗುರಿ ಮುಟ್ಟಿ ಸರಣಿಯಲ್ಲಿ ಮೊದಲ ಗೆಲವು ಪಡೆಯಿತು. 2-1ರಿಂದ ಇಂಗ್ಲೆಂಡ್ ತಂಡ ಸರಣಿ ಗೆದ್ದುಕೊಂಡಿತು.