ಲಂಡನ್: ವೆಸ್ಟ್ಇಂಡೀಸ್ ಮತ್ತು ಪಾಕಿಸ್ತಾನ ವಿರುದ್ಧದ ನಿಗದಿತ ಟೆಸ್ಟ್ ಸರಣಿಗಾಗಿ ಮುಂದಿನ ವಾರದಿಂದ ಇಂಗ್ಲೆಂಡ್ ತಂಡದ ಕ್ರಿಕೆಟ್ ಆಟಗಾರರರು ತರಬೇತಿಗೆ ಹಾಜರಾಗಲಿದ್ದು, ಪ್ರತಿಯೊಬ್ಬ ಬೌಲರ್ಗೂ ವೈಯಕ್ತಿಕವಾಗಿ ಒಂದು ಬಾಕ್ಸ್ ಚೆಂಡುಗಳನ್ನು ನೀಡಲಾಗುತ್ತದೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಜುಲೈ ತನಕ ತನ್ನ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನ ಆರಂಭಕ್ಕಾಗಿ 30 ಕ್ರಿಕೆಟಿಗರ ತಂಡವನ್ನು ಸಿದ್ಧಪಡಿಸುವುದಾಗಿ ಗುರುವಾರ ಪ್ರಕಟಿಸಿತು.
ನಾವು ಸಾಧ್ಯವಾದಷ್ಟು ಅಪಾಯಗಳನ್ನು ತಗ್ಗಿಸಬೇಕಿದೆ. ಒಂದೇ ಮೈದಾನದಲ್ಲಿ ನಾಲ್ಕರಿಂದ ಐವರು ಬೌಲರ್ಗಳಿಗೆ ಒಬ್ಬ ತರಬೇತುದಾರರು ಇರಲಿದ್ದಾರೆ. ತರಬೇತಿ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗುತ್ತದೆ ಎಂದು ಇಸಿಬಿ ನಿರ್ದೇಶಕ ಆಶ್ಲೇ ಗೈಲ್ಸ್ ಹೇಳಿದ್ದಾರೆ.
ತರಬೇತಿ ಪ್ರಾರಂಭವಾದಾಗ ಒಬ್ಬೊಬ್ಬ ಬೌಲರ್ಗೆ ಒಂದು ಬಾಕ್ಸ್ ಚೆಂಡು ನೀಡಲಾಗುವುದು. ತರಬೇತಿ ಮುಗಿದ ನಂತರ ಅವುಗಳನ್ನು ಆಟಗಾರರು ತಮ್ಮ ಕಿಟ್ನಲ್ಲಿ ಇಟ್ಟುಕೊಳ್ಳಬೇಕು. ಪ್ರತ್ಯೇಕ ವಾಟರ್ ಬಾಟಲ್ಗಳನ್ನೂ ನೀಡಲಾಗುವುದು. ಎಲ್ಲ ಆಟಗಾರರು ಕಾರಿನಲ್ಲಿ ತರಬೇತಿಗೆ ಆಗಮಿಸುವಂತೆ ತಿಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೊದಲು ಬೌಲರ್ಗಳು ತರಬೇತಿ ಪ್ರಾರಂಭಿಸುತ್ತಾರೆ. ಎರಡು ವಾರಗಳ ನಂತರ ಬ್ಯಾಟ್ಸ್ಮನ್ಗಳು ಅಭ್ಯಾಸಕ್ಕೆ ಇಳಿಯಲಿದ್ದಾರೆ. ಬ್ಯಾಟ್ಸ್ಮನ್ಗಳು ಚೆಂಡನ್ನು ತಮ್ಮ ಕೈಯಿಂದ ಕೋಚ್ಗೆ ನೀಡುವಂತಿಲ್ಲ. ಬದಲಿಗೆ ಬ್ಯಾಟ್ನಿಂದ ಹೊಡೆಯುವ ಮೂಲಕ ಚೆಂಡನ್ನು ತರಬೇತುದಾರರ ಬಳಿ ತಲುಪಿಸಲಿದ್ದಾರೆ ಎಂದು ಹೇಳಲಾಗಿದೆ.