ಮ್ಯಾಂಚೆಸ್ಟರ್: ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ವಿಂಡೀಸ್ ತಂಡವನ್ನು 287 ರನ್ಗಳಿಗೆ ಆಲೌಟ್ ಮಾಡಿರುವ ಆಂಗ್ಲಪಡೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದು, ಒಟ್ಟಾರೆ 219 ರನ್ಗಳ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ 9 ವಿಕೆಟ್ ಕಳೆದುಕೊಂಡು 469 ರನ್ ಕಲೆ ಹಾಕಿ ಡಿಕ್ಲೇರ್ ಘೋಷಿಸಿಕೊಂಡಿತ್ತು. ಇದಕ್ಕುತ್ತರವಾಗಿ ವಿಂಡೀಸ್ ತಂಡವನ್ನು 287ರನ್ಗಳಿಗೆ ಕಟ್ಟಿ ಹಾಕಿದೆ. ಈ ಮೂಲಕ 182 ರನ್ಗಳ ಮುನ್ನಡೆ ಸಾಧಿಸಿದೆ.
3ನೇ ದಿನದಾಟದಲ್ಲಿ 31ಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ನಾಲ್ಕನೇ ದಿನ ಮೊದಲೆರಡು ಸೆಸೆನ್ನಲ್ಲಿ ಅದ್ಭುತ ಆಟವನ್ನಾಡಿತ್ತು. 242 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ ಪಂದ್ಯವನ್ನು ಸುಲಭವಾಗಿ ಡ್ರಾ ಸಾಧಿಸಿ ಸರಣಿ ಮುನ್ನಡೆ ಉಳಿಸಿಕೊಳ್ಳುವ ಆಲೋಚನೆಯಲ್ಲಿತ್ತು. ಆದರೆ, ಇಂಗ್ಲೆಂಡ್ ಬೌಲರ್ಗಳ ದಾಳಿಗೆ ಸಿಲುಕಿ 287 ರನ್ಗಳಿಗೆ ಸರ್ವಪತನ ಕಂಡಿತು.
3ನೇ ದಿನ ನೈಟ್ ವಾಚ್ಮನ್ ಆಗಿದ್ದ ಅಲ್ಜಾರಿ ಜೋಸೆಫ್ 32, ಕ್ರೈಗ್ ಬ್ರಾತ್ವೇಟ್ 75 ರನ್ಗಳಿಸಿದರೆ, ಶಾಯ್ ಹೋಪ್ 25 ರನ್ಗಳಿಸಿ ಮತ್ತೊಮ್ಮೆ ವಿಫಲರಾದರು. ಶಮರ್ಹ ಬ್ರೂಕ್ಸ್ 68, ರಾಸ್ಟನ್ ಚೇಸ್ 51 ರನ್ಗಳಿಸಿದರು. ಆದರೆ, ನಂತರ ಬಂದ ಯಾವುದೇ ಬ್ಯಾಟ್ಸ್ಮನ್ ಎರಡಂಕಿ ಮೊತ್ತ ದಾಟಲಿಲ್ಲ. ಕಳೆದ ಪಂದ್ಯದ ಹೀರೋ ಬ್ಲಾಕ್ವುಡ್ ಹಾಗೂ ಡೋರಿಚ್ ಶೂನ್ಯ ಸಂಪಾದನೆ ಮಾಡಿದರೆ, ನಾಯಕ ಹೋಲ್ಡರ್ 2, ಗೇಬ್ರಿಯಲ್ ಕೂಡ ಡಕ್ ಔಟ್ ಆದರು. 242 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್ 45 ರನ್ಗಳಿಸುವಷ್ಟರಲ್ಲಿ ತನ್ನ 6 ವಿಕೆಟ್ ಕಳೆದುಕೊಂಡಿತು.
ಇಂಗ್ಲೆಂಡ್ ಪರ ಬ್ರಾಡ್ ಹಾಗೂ ಕ್ರಿಸ್ ವೋಕ್ಸ್ ತಲಾ ಮೂರು ವಿಕೆಟ್, ಸ್ಯಾಮ್ ಕರನ್ 2 ಹಾಗೂ ಡಾಮ್ ಬೆಸ್ ಮತ್ತು ಸ್ಟೋಕ್ಸ್ ತಲಾ ಒಂದು ವಿಕೆಟ್ ಪಡೆದರು.
ಇನ್ನು 182 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 37 ರನ್ಗಳಿಸಿದೆ. ಇನ್ನು ಒಂದು ದಿನದ ಆಟ ಬಾಕಿಯಿದ್ದು ಈ ಪಂದ್ಯವೂ ಕೂಡ ಕಳೆದ ಪಂದ್ಯದಂತೆ ರೋಚಕ ಹಂತ ತಲುಪಲಿದೆ.