ಮುಂಬೈ: ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸಂಜು ಸಾಮ್ಸನ್ ಅವರನ್ನು ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ರಾಜಸ್ತಾನ ರಾಯಲ್ಸ್ ತಂಡಕ್ಕೆ ಕರೆತಂದಿದ್ದ ವಿಚಾರವನ್ನು ಕೇರಳ ಕ್ರಿಕೆಟಿಗ ಬಹಿರಂಗಪಡಿಸಿದ್ದಾರೆ.
"ರಾಹುಲ್ ಬಾಯ್ ಮತ್ತು ಝುಬಿನ್ ಭರೂಚ (ಆರ್ಆರ್ ತಂಡದ ಮುಖ್ಯಸ್ಥ) ತಂಡಕ್ಕೆ ಯುವ ಆಟಗಾರರನ್ನು ಕರೆತರುವುದಕ್ಕಾಗಿ ಆಯ್ಕೆ ಟ್ರಯಲ್ಸ್ ನಡೆಸುತ್ತಿದ್ದರು. ಅಲ್ಲಿ ನನ್ನನ್ನು ಗುರುತಿಸಿದ ದ್ರಾವಿಡ್ ಭಾಯ್, ನನ್ನ ತಂಡದಲ್ಲಿ ಆಡುತ್ತೀಯಾ? ಎಂದು ಕೇಳಿದ್ದರು. ಅದು ನನ್ನ ಜೀವನದ ಅವಿಸ್ಮರಣೀಯ ದಿನ. ನನ್ನ ಕನಸು ನನಸಾದ ದಿನ" ಎಂದು ಸಂಜು ಸಾಮ್ಸನ್ ರಾಜಸ್ಥಾನ್ ರಾಯಲ್ಸ್ ನಡೆಸಿದ ಲೈವ್ ಸಂವಾದದ ವೇಳೆ ತಿಳಿಸಿದ್ದಾರೆ.
ನಂತರದ ದಿನಗಳಲ್ಲಿ ಭಾರತ ಎ ತಂಡದಲ್ಲಿ ಆಡುವಾಗಲೂ ದ್ರಾವಿಡ್ ಕೋಚಿಂಗ್ನಲ್ಲಿ ಸಂಜು ಪಳಗಿದ್ದರು. "ಈಗಲು ನನಗೇನಾದರೂ ಅನುಮಾನಗಳಿದ್ದಲ್ಲಿ ದ್ರಾವಿಡ್ ಸರ್ಗೆ ಫೋನ್ ಮಾಡಿ ಕೇಳುತ್ತೇನೆ. ಅವರು ನನಗೆ ಯಾವುದೇ ಸಂದರ್ಭದಲ್ಲಾದರೂ ನೆರವಾಗುತ್ತಾರೆ" ಎಂದು ಇಶ್ ಶೋಧಿ ಜೊತೆ ನಡೆದ ಆನ್ಲೈನ್ ಸಂವಾದದಲ್ಲಿ ಯುವ ಕ್ರಿಕೆಟಿಗ ತಿಳಿಸಿದ್ದಾರೆ.
ಭಾರತ ತಂಡದ ಕದ ತಟ್ಟುತ್ತಿರುವ ಸಂಜು ಈಗಾಗಲೇ ಒಂದೆರೆಡು ಟಿ20 ಪಂದ್ಯಗಳನ್ನಾಡಿದ್ದಾರೆ. ಇವರು ಐಪಿಎಲ್ನಲ್ಲಿ 93 ಪಂದ್ಯಗಳನ್ನಾಡಿದ್ದು 2,209 ರನ್ ಸಾಧನೆ ಮಾಡಿದ್ದಾರೆ. ಇದರಲ್ಲಿ 2 ಶತಕ ಹಾಗೂ 10 ಅರ್ಧಶತಕಗಳು ಸೇರಿವೆ.