ಸಾತಾಂಪ್ಟನ್: ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುತ್ತಿರುವ ವೈದ್ಯರು, ನರ್ಸ್ ಹಾಗೂ ಪೊಲೀಸರಿಗೆ ಗೌರವ ಸೂಚಿಸುವ ಸಲುವಾಗಿ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟಿಗರು ಅಭ್ಯಾಸ ಮಾಡುವ ಸಂದರ್ಭದಲ್ಲಿ ವೈದ್ಯರ ಹೆಸರಿರುವ ಜರ್ಸಿಯನ್ನು ತೊಟ್ಟಿದ್ದಾರೆ.
ಭಾರತೀಯ ಮೂಲದ ವೈದ್ಯ ಡಾ. ವಿಕಾಸ್ ಕುಮಾರ್ ಹೆಸರಿರುವ ಜರ್ಸಿಯನ್ನು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ತೊಟ್ಟಿರುವ ಫೋಟೋ ವೈರಲ್ ಆಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿದೆ.
ದೆಹಲಿ ಮೂಲಕ ಡಾ. ವಿಕಾಸ್ ಎರಡು ವರ್ಷದ ಹಿಂದೆ ಇಂಗ್ಲೆಂಡ್ಗೆ ತೆರಳಿದ್ದು, ಡಾರ್ಲಿಂಗ್ಟನ್ ಎನ್‍ಎಚ್‍ಎಸ್ ಟ್ರಸ್ಟ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕ್ರಿಕೆಟಿಗರು ಜರ್ಸಿ ತೊಟ್ಟಿರುವ ವಿಚಾರಕ್ಕೆ ಸಂತಸ ವ್ಯಕ್ತಪಡಿಸಿರುವ ವಿಕಾಸ್, ಇದು ನನಗೆ ಮಾತ್ರವಲ್ಲ, ಇಡೀ ವೈದ್ಯ ಸಮುದಾಯಕ್ಕೆ ಸಿಕ್ಕ ಗೌರವ ಎಂದಿದ್ದಾರೆ.
ವಿಕಾಸ್ ಕುಮಾರ್ ಜೊತೆಗೆ ಡಾ.ಜಮಸ್ಪ್ ಕೈಖುಸ್ರೂರ್, ಹರಿಕೃಷ್ಣ ಶಾ ಹಾಗೂ ಕೃಷ್ಣ ಅಘಡಾ ಎಂಬ ವೈದ್ಯರ ಹೆಸರೂ ಕೂಡ ಇಂಗ್ಲೆಂಡ್ ಕ್ರಿಕೆಟಿಗರ ಜರ್ಸಿಯಲ್ಲಿ ಕಂಡುಬಂದಿದೆ.
ಸುದೀರ್ಘ 117 ದಿನಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದು, ಮೊದಲ ಟೆಸ್ಟ್‌ನಲ್ಲಿ ಸದ್ಯದ ಮಟ್ಟಿಗೆ ವೆಸ್ಟ್ ಇಂಡೀಸ್ 114 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯುವ ಮೂಲಕ ಮೇಲುಗೈ ಸಾಧಿಸಿದೆ. ಇನ್ನು ಎರಡು ದಿನಗಳ ಆಟ ಬಾಕಿ ಉಳಿದಿದ್ದು ವಿಜಯ ಲಕ್ಷ್ಮೀ ಯಾರ ಪಾಲಾಗಲಿದೆ? ಎಂದು ಕಾದು ನೋಡಬೇಕಿದೆ.